ಪರಿಸರ ಸಮೃದ್ಧಗೊಳಿಸಿ ಸಮತೋಲನ ಕಾಪಾಡಲು ಕರೆ
ತಿಪಟೂರು, ಜೂ. ೯- ವನ್ಯ ಜೀವಿಗಳು ಹಾಗೂ ಮಾನವ ಸಂಕುಲಗಳ ಬೆಳವಣಿಗೆಗೆ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಅದ್ಯ ಕರ್ತವ್ಯ ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಶ್ರೀ ಕಾಡಸಿದ್ದೇಶ್ವರ ವಿದ್ಯಾಸಂಸ್ಥೆಯ ಎಸ್.ಕೆ. ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶ್ವದ ೧೪೩ ದೇಶಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಆಚರಣೆ ಮಾಡಲಾಗುತ್ತಿದೆ. ಅದರಂತೆ ತಾಪಮಾನ ಸಮತೋಲನಕ್ಕೆ, ಪ್ರಕೃತಿಯ ವಿಕೋಪಗಳನ್ನು ತಡೆಗಟ್ಟುವುದಕ್ಕೆ ಪರಿಸರವನ್ನು ಸಮೃದ್ಧಗೊಳಿಸುವ ಕೆಲಸವನ್ನು ಪ್ರತಿ ವ್ಯಕ್ತಿಯು ಮಾಡಬೇಕು. ಮನುಷ್ಯನ ಹುಟ್ಟಿದ ದಿನದಂದು ಹಾಗೂ ಅವರ ವಿಶೇಷ ದಿನಗಳ ದಿನ ಭೂ ತಾಯಿಗೆ ನಮಸ್ಕರಿಸಿ ಒಂದೊಂದು ಗಿಡ ನೆಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ವಹಿಸಿದ್ದರು. ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಭೇರುಗಂಡಿ ಸ್ವಾಮೀಜಿ, ಶ್ರೀ ವಿಶ್ವನಾಥ ಸ್ವಾಮೀಜಿ, ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್, ಆಡಳಿತಾಧಿಕಾರಿ ಶಂಭು, ಶಾಲೆಯ ಮುಖ್ಯ ಶಿಕ್ಷಕಿ ಕವಿತಾ ಮತ್ತಿತರರು ಉಪಸ್ಥಿತರಿದ್ದರು.