ಕೈವಾರದಲ್ಲಿ ಆರಾಧನೆ ಪ್ರಯುಕ್ತ ಹೋಮ
ಚಿಂತಾಮಣಿ.ಜು.೯- ಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿನಾರೇಯಣ ಮಠದ ಸಂಕೀರ್ತನಾ ಮಂದಿರದಲ್ಲಿ ಯೋಗಿ ನಾರೇಯಣ ತಾತಯ್ಯನವರ ೧೮೯ ನೇ ಜೀವ ಸಮಾಧಿ ಪ್ರವೇಶ ಪರ್ವ ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಹೋಮವನ್ನು ಶ್ರದ್ಧಾ ಭಕ್ತಿಗಳಿಂದ ನೆರವೇರಿಸಲಾಯಿತು.
ಆರಾಧನಾ ಮಹೋತ್ಸವದ ಹಿಂದಿನ ದಿನದಂದು ವಿಶೇಷ ಹೋಮವನ್ನು ನಡೆಸಿಕೊಂಡು ಬರುವುದು ಸಂಪ್ರದಾಯವಾಗಿದೆ. ಅರ್ಚಕ ವೃಂದದವರು ಶಾಸ್ತ್ರೋಕ್ತವಾಗಿ ಹೋಮವನ್ನು ನಡೆಸಿಕೊಟ್ಟರು. ಕಲಶಗಳನ್ನು ಸ್ಥಾಪಿಸಿ ಪೂಜಿಸಲಾಯಿತು. ಪಂಚಾಕ್ಷರೀ ಹೋಮದೊಂದಿಗೆ ಗಣಪತಿ, ನವಗ್ರಹ ಹೋಮಗಳನ್ನು ನೆರವೇರಿಸಲಾಯಿತು. ಈ ಹೋಮದಲ್ಲಿ ನೂರಾರು ಸಾಧು ಸಂತರು ಭಾಗವಹಿಸಿದ್ದರು. ಪೂಜೆಯ ನಂತರ ಪೂರ್ಣಾಹುತಿಯನ್ನು ಸಮರ್ಪಿಸಲಾಯಿತು.ಹೋಮದ ನಂತರ ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಸಮರ್ಪಿಸಲಾಯಿತು.
ಕೈವಾರ ಕ್ಷೇತ್ರದ ಶ್ರೀ ಯೋಗಿ ನಾರೇಯಣ ಮಠದ ಟ್ರಸ್ಟ್‌ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್, ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್ ಮುಂತಾದವರು ಉಪಸ್ಥಿತರಿದ್ದರು. ಭಕ್ತರು ತಂಡೋಪತಂಡವಾಗಿ ಆಗಮಿಸಿ ರಾತ್ರಿಯಿಡೀ ಅಖಂಡ ಭಜನೆ ಸಂಕೀರ್ತನೆಯಲ್ಲಿ ಭಾಗವಹಿಸಿದ್ದರು.
ಆರಾಧನೆ ಇಂದು (೯.೬.೨೪-ಭಾನುವಾರ) : ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿ ನಾರೇಯಣ ಸಭಾಂಗಣದಲ್ಲಿ ಇಂದು ಸದ್ಗುರು ತಾತಯ್ಯನವರ ೧೮೯ ನೇ ಆರಾಧನಾ ಮಹೋತ್ಸವ ನಡೆಯಲಿದೆ. ದೇವಾಲಯದಲ್ಲಿ ಬೆಳಿಗ್ಗೆ ೭.೩೦ ಗಂಟೆಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ ನಡೆಯುತ್ತದೆ. ನಂತರ ಸಭಾಂಗಣದಲ್ಲಿ ನಡೆಯುವ ಶುಭ ಸಮಾರಂಭದಲ್ಲಿ ಭಾಗವಹಿಸುವ ಸಾಧು ಸತ್ಪುರುಷರಿಗೆ ಕಾಷಾಯವಸ್ತ್ರದಾನ ಮಾಡಲಾಗುವುದು. ೨೦೨೩-೨೦೨೪ ನೇ ಸಾಲಿನ ವರದಿಯನ್ನು ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಸದ್ಗುರು ತಾತಯ್ಯನವರಿಗೆ ಸಮರ್ಪಿಸುವರು.
ತಿರುಮಲದಲ್ಲಿ ತಾತಯ್ಯನವರ ಸ್ಮರಣೆ
ತಿರುಮಲ ತಿರುಪತಿ ದೇವಸ್ಥಾನಂ, ತಿರುಪತಿಯ ಬೆಟ್ಟದ ಮೇಲಿರುವ ನಾದನೀರಾಜನಂ ಸಾಂಸ್ಕೃತಿಕ ವೇದಿಕೆಯಲ್ಲಿ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ೧೮೯ ನೇ ಆರಾಧನಾ ಮಹೋತ್ಸವದ ಅಂಗವಾಗಿ ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರಿಂದ ದಿನಾಂಕ ೧೦.೬.೨೦೨೪ ಸೋಮವಾರದಂದು ಕೈವಾರ ತಾತಯ್ಯನವರ ಕೀರ್ತನೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.