ಉದ್ಭವ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ
ಹೊಸಕೋಟೆ.ಜೂ.೯-ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಶ್ರೀ ಉದ್ಭವ ಶನೇಶ್ವರ ಸ್ವಾಮಿ ದೇವಾಲಯದ ಬಹ್ಮರಥೋತ್ಸವ ಹಾಗೂ ೪೪ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಭಾಗವಹಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಆಚರಣೆಗಳಿಗೆ ಪೂರ್ವಿಕರ ಕಾಲದಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು ಶ್ರಧ್ದಾ ಭಕ್ತಿಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸಮೇತನಹಳ್ಳಿ ಗ್ರಾಮದಲ್ಲಿ ಸಹ ಬ್ರಹ್ಮರಥೋತ್ಸವದ ಜೊತೆಗೆ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ೪೪ನೇ ವಾರ್ಷಿಕೋತ್ಸವ ಸಮಾರಂಭವನ್ನು ಧಾರ್ಮಿಕ ಆಚರಣೆಗಳ ಮೂಲಕ ಆಚರಣೆ ಮಾಡಿದ್ದಾರೆ. ಶನೇಶ್ವರ ಸ್ವಾಮಿ ಪ್ರಪಂಚದ ಸಕಲ ಜೀವರಾಶಿಗಳಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ದೇವಾಲಯದ ಧರ್ಮದರ್ಶಿ ಶಾಂತರಾಜ್ ಮಾತನಾಡಿ ದೇವಾಲಯದಲ್ಲಿ ಶ್ರೀ ಶನೇಶ್ವರಸ್ವಾಮಿ ತೈಲಾಭಿಷೇಕ ಮಾಡಿದರೆ ಭಕ್ತರ ಕಷ್ಟಗಳು ಈಡೇರಲಿದ್ದು ಭಕ್ತಾಧಿಗಳ ನಂಬಿಕೆ ಸಹ ಆಗಿದೆ. ಆದ್ದರಿಂದಲೆ ಸಹಸ್ರಾರು ಭಕ್ತರು ದೇವಾಲಯಕ್ಕೆ ಸ್ವಯಂಪ್ರೇರಿತರಾಗಿ ಆಗಮಿಸಿ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಪ್ರತಿ ವರ್ಷ ನಡೆಯುವ ರಥೋತ್ಸವ ಹಾಗೂ ವಾರ್ಷಿಕೋತ್ಸವಕ್ಕೂ ಭಕ್ತಾದಿಗಳು ಆಗಮಿಸಲಿದ್ದು ಭಕ್ತರಿಂದಲೆ ಪ್ರಸಾದ ವ್ಯವಸ್ಥೆ ಸಹ ಮಾಡಲಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಸಿ.ನಾಗರಾಜ್, ಧರ್ಮದರ್ಶಿ ಶಾಂತರಾಜ್ ಸ್ವಾಮೀಜಿ, ನಿವೃತ್ತ ಯೋಧ ಶ್ರೀನಿವಾಸ್, ಗ್ರಾಪಂ ಸದಸ್ಯ ಮುನಿರಾಜು, ಉಮೇಶ್, ಮುಖಂಡರಾದ ಬಿಎಂಟಿಸಿ ನಾಗರಾಜ್, ಕಲಾವಿದರಾದ ಗುರುವಾರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.