ವಿಜಯಪುರದಲ್ಲಿ ಜೂ.15ರಂದು ಶರಣ ಸಂಕುಲ ನೃತ್ಯ ರೂಪಕ
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ.9:ಸಿರಿಗೆರೆ ತರಳಬಾಳು ಕಲಾ ಸಂಘದ ವತಿಯಿಂದ ತರಳುಬಾಳು ಜಗದ್ಗುರು 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ “ಶರಣ ಸಂಕುಲ” ನೃತ್ಯರೂಪಕ ಕಾರ್ಯಕ್ರಮ ಜೂ.15 ಸಂಜೆ 6.30ಗಂಟೆಗೆ ನಗರದ ಜ್ಞಾನಯೋಗಾಶ್ರಮದಲ್ಲಿ ಜರುಗಲಿದೆ.
ಕಳೆದ 25 ವರ್ಷಗಳಿಂದ ದೇಶದೆಲ್ಲೆಡೆ 12 ನೇ ಶತಮಾನದ ಶಿವಶರಣರ ತತ್ವಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೃತ್ಯ, ಸಂಗೀತ ಮತ್ತು ಅಭಿನಯಗಳ ಮೂಲಕ ಪ್ರದರ್ಶಿಸುವ ‘ಶರಣಸಂಕುಲ’ ಕಾರ್ಯಕ್ರಮ ಇದೀಗ ರಜತ ಮಹೋತ್ಸವ ಆಚರಿಸುತ್ತಿದೆ.
ವಿಜಯಪುರದಲ್ಲಿ ಅನುಭವ ಮಂಟಪದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ವಿಶ್ವಬಂಧು ಮರುಳಸಿದ್ಧರು, ಅಕ್ಕಮಹಾದೇವಿಗೆ ದೀಕ್ಷೆ ಕೊಡುವ ಹರಳಯ್ಯ, ನುಲಿಯ ಚಂದಯ್ಯ, ಮೋಳಿಗೆ ಮಾರಯ್ಯ ಅವರ ಬದುಕಿನ ಸಾಧನೆಯನ್ನು ‘ಶರಣ ಸಂಕುಲ’ ಕಾರ್ಯಕ್ರಮದ ಮೂಲಕ ಸಾದರಪಡಿಸುತ್ತಿದ್ದಾರೆ. ಅಲ್ಲದೇ, ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ “ಮಲ್ಲ ಕಂಬ” ಹಾಗೂ “ಮಲ್ಲಿ ಹಗ್ಗ” ಸಾಹಸ ಕ್ರೀಡೆಗಳ ಪ್ರದರ್ಶನ ಏರ್ಪಾಡಾಗಿದೆ.
ಅತ್ಯಂತ ವಿಶೇಷವಾಗಿರುವ ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾಲಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಿರಿಗೆರೆ ತರಳಬಾಳು ಆಶ್ರಮದ ಭಕ್ತರಾಗಿರುವ ಹನಮಂತ ಚಿಂಚಲಿ ಪ್ರಕಟಣೆಯಲ್ಲಿ ಕೋರಿದ್ದಾರೆ.