ರೈತರಿಗೆ ಕೈಗೆಟಕುವ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡಲು ಒತ್ತಾಯ
ಕಲಬುರಗಿ,ಜೂ.8-ಕೃಷಿ ಇಲಾಖೆಯಿಂದ ಪೂರೈಸಲ್ಪಡುತ್ತಿರುವ ಬಿತ್ತನೆ ಬೀಜದ ರಿಯಾಯಿತಿ ಮೊತ್ತವನ್ನು ಪೂರ್ಣ ಬೆಲೆಯ ಶೇ.50 ರಷ್ಟಕ್ಕೆ ನಿಗದಿ ಪಡಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಪಾಟೀಲ ಧಂಗಾಪುರ ಒತ್ತಾಯಿಸಿದ್ದಾರೆ.
ಈ ಸಂಬಂಧ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರಿಗೆ ಮನವಿ ಮಾಡಿರುವ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 8.65 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಜರುಗಲಿದ್ದು, ಈ ಪೈಕಿ 6.50 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯಲಾಗುತ್ತದೆ. ವಿಶೇಷವಾಗಿ ತೊಗರಿ ಬೆಳೆ 4.5 ರಿಂದ 5 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಹವಮಾನ ವೈಪರಿತ್ಯದಿಂದಾಗಿ ನೆಟೆ ರೋಗದಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 2024-25ನೇ ಸಾಲಿನ ಮುಂಗಾರು ಹಂಗಾಮು ಆಶಾದಾಯಕವಾಗಿದ್ದು, ಜಿಲ್ಲೆಯಲ್ಲಿ ಮುಂಗಾರು ಮಳೆ ಸಕಾಲಿಕವಾಗಿ ಬಿದ್ದಿರುವುದರಿಂದ ಮುಂಗಾರು ಬಿತ್ತನೆ ಪ್ರಾರಂಭವಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಬೀಜಗಳ ದರ ಶೇ.25 ರಿಂದ ಶೇ.38 ರಷ್ಟುವಾಗಿರುವುದರಿಂದ ಬಿತ್ತನೆ ಬೀಜ ಖರೀದಿಗೆ ರೈತರು ತೊಂದರೆ ಪಡುತ್ತಿದ್ದಾರೆ. ಆದ್ದರಿಂದ ಕೃಷಿ ಇಲಾಖೆಯಿಂದ ಪೂರೈಸಲಾಗುವ ಬಿತ್ತನೆ ಬೀಜಗಳ ರಿಯಾಯಿತಿ ದರವನ್ನು ಮಾರಾಟ ಬೆಲೆಯ ಶೇ.50 ನಿಗದಿ ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.