ವಾಣಿಜ್ಯ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫುಲ ಅವಕಾಶ: ಬದಾಮಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.9: ಇಂದು ಬ್ಯಾಂಕಿಂಗ್ ಕ್ಷೇತ್ರವು ವ್ಯಾಪಕವಾಗಿ ಅಭಿವೃದ್ಧಿ ಸಾಧಿಸುತ್ತಿದ್ದು, ಪ್ರಸ್ತುತ ಅದರ ಕಾರ್ಯ ವ್ಯಾಪ್ತಿಯು ಕೇವಲ ಭೌತಿಕ ಹಣಕಾಸಿನ ವ್ಯವಹಾರಗಳಿಗೆ ಮಾತ್ರ ಸಿಮೀತವಾಗಿರದೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಗ್ರಾಹಕರಿಗೆ ಇ-ಬ್ಯಾಂಕಿಂಗ್ ಸೌಲಭ್ಯದ ಜೊತೆಗೆ ಇಂಟರನೆಟ್, ಮೊಬೈಲ್ ಬ್ಯಾಂಕಿಂಗ್, ಪೇಪರ್ ಲೆಸ್ ವ್ಯವಹಾರ, ಎನಿಟೈಮ್-ಎನಿವ್ಹೇರ್ ಬ್ಯಾಂಕಿಂಗ್, ವಿಮೆ, ಸ್ಟಾಕ್ ಟ್ರೇಡಿಂಗ್, ವಿದೇಶಿ ವಿನಿಮಯಗಳಂತಹ ವ್ಯವಹಾರಗಳನ್ನು ಕೈಗೊಳ್ಳುವುದರ ಮೂಲಕ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸೇವಾ ಕ್ಷೇತ್ರವಾಗಿ ಮಾರ್ಪಡುತ್ತಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸುಮಂಗಲಾ ಬದಾಮಿ ಅವರು ಅಭಿಪ್ರಾಯಪಟ್ಟರು.
ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಸಹಯೋಗದಡಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಆಯೋಜಿಸಿದ “ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು” ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಇಂದಿನ ಸ್ಪರ್ಧಾತ್ಮಕ ಪೈಪೋಟಿ ಯುಗದಲ್ಲಿ ಬಿ.ಕಾಂ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಪದವಿ ಜತೆಗೆ ವಿಷಯ ಜ್ಞಾನ, ಭಾಷಾ ಪಾಂಡಿತ್ಯ, ವಿಶ್ಲೇಷಣಾ ಮನೋಭಾವ, ತಾರ್ಕಿಕ ಶಕ್ತಿ, ಸಂವಹನ ಕೌಶಲ್ಯ, ಕಂಪ್ಯೂಟರ್ ಜ್ಞಾನ, ಸಂದರ್ಶನ ಕಲೆ ಮತ್ತು ಗುಂಪು ಚರ್ಚೆ, ಕ್ರಿಯಾಶೀಲತೆ-ಸೃಜನಶೀಲತೆಯಂತಹ ಗುಣ ವೈಶಿಷ್ಟ್ಯತೆಗಳನ್ನು ಹೊಂದಿರಲೇಬೇಕು. ಅದರಲ್ಲೂ ವಿಶೇಷವಾಗಿ ಕಂಪ್ಯೂಟರ್ ಆಧಾರಿತವಾಗಿ ನಡೆಯಲಿರುವ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಿ ಉದ್ಯೋಗವಂತರಾಗಲು ಅಕೌಂಟಿಂಗ್ ಜ್ಞಾನದೊಂದಿಗೆ ಲೆಕ್ಕಶಾಸ್ತ್ರಕ್ಕೆ ಸಂಬಂಧಿಸಿದ ಟ್ಯಾಲಿ, ಏಸ್, ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ವಿನೂತನ ಸಾಫ್ಟವೇರ್-ಪ್ರೊಗ್ರ್ಯಾಮ್‍ಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವುದು ಅತಿ ಅವಶ್ಯಕವಾಗಿದೆ. ಬ್ಯಾಂಕಿಂಗ್ ಪರೀಕ್ಷೆಗಳಾದ ಕ್ಲರಿಕಲ್, ಪ್ರೊಬೇಷನರಿ ಆಫೀಸರ್ಸ್ ,ಫೀಲ್ಡ್ ಆಫೀಸರ್ಸ್, ಮ್ಯಾನೇಜರ್‍ನಂತಹ ವಿವಿಧ ಹುದ್ದೆಗಳ ಉದ್ಯೋಗಾವಕಾಶಗಳು ವಿಫುಲವಾಗಿರುವದರಿಂದ ವಿದ್ಯಾರ್ಥಿಗಳು ಪಠ್ಯಕ್ರಮಕ್ಕನುಗುಣವಾಗಿ ಸ್ಟಡಿ ಮಟೀರಿಯಲ್ ಸಂಗ್ರಹಿಸುವುದು, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಮತ್ತು ಗುಂಪು ಚರ್ಚೆಗಳಲ್ಲಿ ಭಾಗವಹಿಸುವದರ ಮೂಲಕ ಸತತ ಅಧ್ಯಯನ, ಕಠಿಣ ಪರಿಶ್ರಮ, ಪರೀಕ್ಷೆ ಎದುರಿಸಬಲ್ಲನೆಂಬ ಆತ್ಮವಿಶ್ವಾಸ, ಸಕಾರಾತ್ಮಕ ಆಲೋಚನೆ ಮತ್ತು ಸಾಧಿಸಬಲ್ಲನೆಂಬ ದೃಢ ನಂಬಿಕೆಯೊಂದಿಗೆ ಪ್ರಯತ್ನಶೀಲರಾದರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು ಎಂದು ಕಿವಿಮಾತು ಹೇಳಿದರು.
ಇನ್ನೊರ್ವ ಪ್ರಾಧ್ಯಾಪಕ ಪ್ರೊ. ಐ.ಬಿ. ಜಾಬಾ ಅವರು ಪದವಿ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಯಸುವ ಸ್ನಾತಕೋತ್ತರ ಪದವಿ ಕೋರ್ಸಗಳಾದ ಎಂ.ಬಿ.ಎ, ಎಂ.ಸಿ.ಎ, ಎಂ.ಕಾ, ಎಂ.ಇ.ಎಂ. ಎಂ.ಎಸ್.ಡ್ಲ್ಯೂನಂತಹ ವೃತ್ತಿಪರ ಕೋರ್ಸಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಉನ್ನತ ಶಿಕ್ಷಣ ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದುತ್ತಾ ಪದವಿ ವ್ಯಾಸಂಗದ ಜೊತೆಗೆ ಪ್ರಸ್ತುತವಾಗಿ ಬ್ಯಾಂಕಿಂಗ್, ವಿಮೆ, ಹಣಕಾಸು, ಮಾರುಕಟ್ಟೆ, ಕೈಗಾರಿಕೆ ಮತ್ತು ಇತರ ಸೇವಾ ಕ್ಷೇತ್ರಗಳಲ್ಲಿ ದೊರೆಯುವ ಉದ್ಯೋಗಾವಕಾಶಗಳ ಬಗ್ಗೆ ಇಂತಹ ಕಾರ್ಯಾಗಾರಗಳ ಮೂಲಕ ಅರಿವು ಮೂಡಿಸುವುದು ಪ್ರಮುಖ ಉದ್ಧೇಶವಾಗಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಪ್ಲೇಸಮೆಂಟ್ ಘಟಕದಿಂದ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ರೂಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ ಎಂದರು.
ಸಮಾರಂಭದಲ್ಲಿ ಡಾ. ಐ.ಎಸ್. ಶಿವಶರಣರ, ಉಪನ್ಯಾಸಕಿಯರಾದ ಅಶ್ವಿನಿ ಹೊನಕಟ್ಟಿ, ಆಶಾ ಹಜೇರಿ ಇನ್ನಿತರರು ಸಹ ಉಪಸ್ಥಿತರಿದ್ದರು.
ಶ್ರೇಯಾ ಸೋನಾರ ಸ್ವಾಗತಿಸಿದರು. ವೈಷ್ಣವಿ ಬಾಬರ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿ.ಕಾಂ ಮತ್ತು ಬಿ.ಬಿಎ. ವಿದ್ಯಾರ್ಥಿಗಳು ಹಾಜರಿದ್ದರು.