ಪರಿಸರ ಸಂರಕ್ಷಣೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು: ಅಭಿನವ ಶ್ರೀ
ಬಸವಕಲ್ಯಾಣ: ಜೂ.8:ಆನಂದದ ಜೀವನಕ್ಕಾಗಿ ಪ್ರತಿಯೊಬ್ಬರು ಐದು ಸಸಿಗಳನ್ನು ನೆಡೆವ ಜತೆಗೆ ಕಾಳಜಿಯಿಂದ ಬೆಳೆಸಬೇಕು. ಪರಿಸರ ಸಂರಕ್ಷಣೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಪರಿಸರ ಸಮತೋಲನೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಲ್ಲಿಯ ಗವಿಮಠ ಸಂಸ್ಥಾನದ ಶ್ರೀ. ಡಾ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಐಡಿಯಲ್ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಗರಸಭೆ, ಪೋಲಿಸ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಭೂಮಿಯ ಮರು ಸ್ಥಾಪಿಸುವಿಕೆ ಘೋಷ್ಯವಾಕ್ಯದೊಂದಿಗೆ ನಗರದ ಐತಿಹಾಸಿಕ ತ್ರಿಪುರಾಂತ ಕೆರೆಯಲ್ಲಿ ಆಯೋಜಿಸಿದ ಕೆರೆ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶೆಲ್ಫಿ ಫೋಟೋಗಾಗಿ ಸ್ವಚ್ಛತೆ ನಡೆಯಬಾರದು, ಪ್ರಾಮಾಣಿಕವಾಗಿ ಸ್ವಚ್ಛತೆ ಕಾರ್ಯ ನಡೆಯಬೇಕು. ಪರಿಸರ ಕಾಳಜಿಯಿಂದ ಐಡಿಯಲ್ ಸಂಸ್ಥೆ ಕೆರೆ ಸ್ವಚ್ಛತೆಯ ಜತೆಗೆ ಪರಿಸರ ಕುರಿತು ಜಾಗೃತಿ ಮೂಡಿಸುವ ಮತ್ತು ಪ್ರೋತ್ಸಾಹಿಸುವ ಆಶಯದೊಂದಿಗೆ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭೆ ಪೌರಾಯುಕ್ತ ರಾಜು ಬಣಕರ್ ಮಾತನಾಡಿ, ಪರಿಸರ ಸಂರಕ್ಷಣೆ, ನಗರ ಸ್ವಚ್ಛತೆ ನಗರ ಸಭೆಯವರ ಕಾರ್ಯ ಎನ್ನುವ ಭಾವನೆ ಸರಿಯಲ್ಲ. ಈ ಕಾರ್ಯಕ್ಕೆ ಕೈಜೋಡಿಸುವದು ಎಲ್ಲ ನಾಗರಿಕರ ಕರ್ತವ್ಯವೂ ಆಗಿದೆ ಎಂದರು.
ಐಡಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುಜಾಹಿದ ಪಾಶಾ ಖುರೇಶಿ ಮಾತನಾಡಿ, ಕರೆಯ ಸ್ವಚ್ಛತೆ ಜತೆಗೆ ಪರಿಸರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಐತಿಹಾಸಿಕ ತ್ರಿಪುರಾಂತ ಕೆರೆಯ ಸ್ವಚ್ಛತೆಯ ಜತೆಗೆ ಕೆರೆಯ ದಡೆಯ ಮೇಲೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಆರ್‍ಎಫ್‍ಒ ಐಶ್ವರ್ಯ ಗೊಬ್ಬೂರ ಮಾತನಾಡಿ, ಪರಿಸರ ಅಸಮತೋಲದಿಂದ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವದು ಎಲ್ಲರ ಜವಾಬ್ದಾರಿಯಾಗಿದೆ. ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಗಾಳಿ ಸಂರಕ್ಷಣೆಯ ಬಗ್ಗೆ ಕಾಳಜಿ ಅವಶ್ಯಕ. ಸಸಿಗಳನ್ನು ನೆಡುವ ಜತೆಗೆ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಐಡಿಯಲ್ ಸಂಸ್ಥೆಯ ಸದಸ್ಯ ಮುಕ್ತದೀೀರ ಉಮರ್ ಪ್ರಾಸ್ತಾವಿಕ ಮಾತನಾಡಿದರು. ಆರ್‍ಎಫ್‍ಒ ಕರೆಪ್ಪ ಪೂಜಾರಿ, ಪಿಎಸ್‍ಐ ಸುವರ್ಣ ಮಲಶೆಟ್ಟಿ, ಎಆರ್‍ಎಫ್‍ಒ ಸಂತೋಷಕುಮಾರ ಯಾಚೆ, ನಗರಸಭೆ ಪರಿಸರ ಅಭಿಯಂತರ ಮನೋಜ ಕಾಂಬಳೆ, ಎಇಇ ಶಿವಶರಣಪ್ಪಾ ಸಜ್ಜನಶೆಟ್ಟಿ, ನಿತ್ಯಾನಂದ ಜಮಾದಾರ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೀರ ವಾರೀಸ ಅಲಿ, ಸಿಆರ್‍ಸಿ ನಾಸೀರ ಪಟೆಲ್, ಗೀರಿಧರ, ಐಡಿಯಲ್ ಪ್ರಾಚಾರ್ಯ ನರೇಂದ್ರಕುಮಾರ, ಐಡಿಯಲ್ ಗ್ಲೋಬಲ್ ಪ್ರಾಚಾರ್ಯ ಬಾಸಿಲ್ ಆಜಾದ್, ಫರಹಾರ, ಪ್ರಭಾ ನೌಗಿರೆ, ಶಿವಕುಮಾರ, ಸತೀಷ ಬೇಲಕಟ್ಟೆ, ರೂಪಾ ಪಂಚಾಳ, ಸುಮಿತ್ರಾ ಘಾಳೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೇಯಾ ಮಠಪತಿ ಸ್ವಾಗತಿಸಿದರು. ರಾಜಕುಮಾರ ರಾಠೋಠ ನಿರೂಪಿಸಿದರು. ಅಬ್ದುಲ್ ಮಾಜೀದ ವಂದಿಸಿದರು.