ಅನುದಾನದಲ್ಲಿ ಕೋಟ್ಯಾಂತರ ಅವ್ಯವಹಾರ ಮುಖ್ಯಮಂತ್ರಿಗೆ ಮನವಿ
ಬೀದರ :ಜೂ.8:ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮ ಪಂಚಾಯತಿಯ ಪಿ.ಡಿ.ಓ. ಹಾಗೂ ಅಧ್ಯಕ್ಷರು ಸೇರಿ, 2020-21 ರಿಂದ 2023-24ನೇ ಸಾಲಿನ ವರೆಗೆ 14 ಮತ್ತು 15ನೇ ಹಣಕಾಸು ಯೋಜನೆ, ಕರ ವಸೂಲಿ, ಉದ್ಯೋಗ ಖಾತ್ರಿ, ನಿಧಿ 1 ಮತ್ತು 2, ಸದಸ್ಯರ ಗೌರವ ಧನ, ಎಸ್ಕ್ರೊ ಖಾತೆಯ (ವಿದ್ಯುತ್ ಬಿಲ್ಲು) ಬೋಗಸ್ ಬಿಲ್ಲು ಮಾಡಿ, ಹಣ ಹೀಗೆ ವಿವಿಧ ಮೂಲಗಳಿಂದ ಬಂದ ಅನುದಾನದಲ್ಲಿ ಕೋಟ್ಯಾಂತರ ಹಣ ಅವ್ಯವಹಾರ ಮಾಡಿ ಲೂಟಿ ಹೊಡೆಯುತ್ತಿದ್ದಾರೆ.
ಗ್ರಾಮಗಳ ಶ್ರಯೋಭಿವೃದ್ಧಿಗೆ ಬಳಸಬೇಕಾದ ಅನುದಾನ ಇಂತಹ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಲೂಟಿಕೋರರ ಜೇಬು ಸೇರುತ್ತಿರುವುದು ವಿಶಾದನೀಯ, ಇದಕ್ಕೆ ಮೇಲಾಧಿಕಾರಿಗಳು ಸಹ ಜಾಣ ಕುರುಡರಾಗಿದ್ದಾರೆ. ಅವ್ಯವಹಾರದ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ರೋಡ್ ರೋಮಿಯೋಗಳನ್ನು ಬಿಟ್ಟು ಭಯಪಡಿಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸಾರ್ವಜನಿಕರು ಅಮಾಯಕರು ಆತಂಕದ ಜೀವನ ನಡೆಸುವಂತಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ ನಿಯಮ 1993 ರ ಪ್ರಕಾರ ಅಧ್ಯಕ್ಷರು/ ಉಪಾಧ್ಯಕ್ಷರು/ ಸದಸ್ಯರು ತಮ್ಮ ಅಧಿಕಾರ ಅವಧಿಯಲ್ಲಿ ಪಂಚಾಯತಿಯ ಹಣಕಾಸಿನ ವ್ಯವಹಾರದಲ್ಲಿ ತಮ್ಮ ರಕ್ತ ಸಂಬಂಧಿಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಬಾರದೆಂಬ ಕಾನೂನು ಇದ್ದರೂ ಕೂಡ 2020-21 ರಿಂದ 2023-24 ರ ವರೆಗೆ ಕೋನಮೇಳಕುಂದಾ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಪುತಳಾಬಾಯಿ ಗಂಡ ಶಿವರಾಮ ಚಲುವಾ ಅವರ ಮಗ ಶ್ರೀ ರಾಜಕುಮಾರ ತಂದೆ ಶಿವರಾಮ ಚಲುವಾ ಅವರು ತಮ್ಮ ಹೆಸರಿನಲ್ಲಿಯೇ ಏಜೆನ್ಸಿ ಹೊಂದಿ ಉದ್ಯೋಗ ಖಾತ್ರಿ ಯೋಜನೆಯ ಲಕ್ಷಗಟ್ಟಲೆ ಹಣ ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿರುವುದು ದಾಖಲೆಯಲ್ಲಿದೆ. ಹೀಗೆ ಈ ಮೂರು ವರ್ಷಗಳಲ್ಲಿ ಅಂದರೆ 2020-21 ರಿಂದ 2023-24 ರ ವರೆಗೆ 14 ಮತ್ತು 15ನೇ ಹಣಕಾಸಿನ ಯೋಜನೆ, ಕರ ವಸೂಲಿ, ಹಣ ನಿಧಿ 1 ಮತ್ತು 2, ಸದಸ್ಯರ ಗೌರವ ಧನ, ಎಸ್ಕ್ರೊ ಖಾತೆಯ (ವಿದ್ಯುತ್ ಬಿಲ್ಲಿನ) ಹೀಗೆ ವಿವಿಧ ಮೂಲಗಳಿಂದ ಜಮೆಯಾದ ಅನುದಾನದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಹೀಗಾಗಿ ಈ ಅವ್ಯವಹಾರದ ಬಗ್ಗೆ ವಿಶೇಷ ಗಮನ ಹರಿಸಿ, ತಕ್ಷಣವೇ ಒಂದು ವಿಶೇಷ ತನಿಖಾ ತಂಡ ರಚಿಸಿ, ಸಂಪೂರ್ಣ ತನಿಖೆಯನ್ನು ಕೈಗೊಂಡು, ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ, ಬೀದರ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಇಂದು ಜಿಲ್ಲಾಧಿಕಾರಗಳ ಮುಖಾಂತರ ಮುಖ್ಯಮಮತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚರಣಜೀತ ಆಣದೂರೆ, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ ಮೊಳಕೇರೆ, ಪ್ರಧಾನ ಕಾರ್ಯದರ್ಶಿ ಕೇತನ ಪಾಟೀಲ,ದಿನೇಶ ಡೊಂಗರ್ಗಿಕರ್, ಧನರಾಜ ಸಾಂಗವಿಕರ್, ಶಾಶ್ವತ ಶೇರಿಕಾರ, ಪೌಲ್ ಸಾಲೊಮಿನ ಉಪಸ್ಥಿತರಿದ್ದರು.