ಮಹಾದ್ವಾರಗಳು ಶ್ರದ್ಧಾ ಭಕ್ತಿ ಅಸ್ಮಿತೆಗಳ ಪ್ರತೀಕ:ಡಾ. ರಾಜಶೇಖರ ಶಿವಾಚಾರ್ಯರು
ಬೀದರ:ಜೂ.8:ಮಹಾದ್ವಾರಗಳು ಪುಣ್ಯಕ್ಷೇತ್ರಗಳ ಗರಿಮೆಯನ್ನು ಹೆಚ್ಚಿಸುತ್ತವಲ್ಲದೇ ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಮಹತ್ವರ ಪಾತ್ರವಹಿಸುತ್ತವೆ ಎಂದು ಬೇಮಳಖೇಡ ಗೋರಟಾ, ಬೀದರ ಮಠದ ಶ್ರೀ.ಷ.ಬ್ರ ಡಾ|| ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಅವರು ಬೀದರ ಹುಮನಾಬಾದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೀನಕೇರಾ ಕ್ರಾಸ್ ಹತ್ತಿರ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ನಂದಿಬೆಟ್ಟ ರೇವಣಸಿದ್ದೇಶ್ವರ ಮಹಾದ್ವಾರವನ್ನು ತಮ್ಮ ಲಿಂಗ ಹಸ್ತದಿಂದ ಉದ್ಘಾಟಿಸಿ ಮಾತನಾಡಿದರು. ಹುಮನಾದ ಸಮೀಪದ ಚೀನಕೇರಾ ಹತ್ತಿರದ ನಂದಿಬೆಟ್ಟದ ಶ್ರೀ ಜಗದ್ಗುರು ರೇವಣ್ಣ ಸಿದ್ದೇಶ್ವರ ಪುಣ್ಯ ಕ್ಷೇತ್ರವು ಸೃಷ್ಠಿ ಸೌಂದರ್ಯದ ಮಡಿಲಲ್ಲಿದ್ದು ಆಕರ್ಷಣೀಯ ಸ್ಥಳವಾಗಿದೆ. ಸಿದ್ದ ಕುಲ ಚಕ್ರವರ್ತಿ ಶ್ರೀ ಜಗದ್ಗುರು ರೇವಣಸಿದ್ಧರು ಕ್ರಿ.ಶ.11ನೇ ಶತಮಾನದಲ್ಲಿ ಇಂದಿನ ಬಸವಕಲ್ಯಾಣದಿಂದ ಕೊಲ್ಲಿಪಾಕಿಗೆ ಧರ್ಮ ಸಂಚಾರ ಕೈಗೊಂಡ ಸಂದರ್ಭದಲ್ಲಿ ಈ ಬೆಟ್ಟದಲ್ಲಿ ಪಾದ ಪ್ರಕ್ಷಾಲನವನ್ನು ಮಾಡಿದ್ದರೆಂಬ ಸಂಗತಿಯು ಜನಜನಿತವಾಗಿದೆ. ಕಳೆದ ಎಳು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದೇವಸ್ಥಾನ ನಿರ್ಮಾಣಗೊಂಡಿದ್ದು ಗ್ರಾಮದ ಭಕ್ತರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ದಿನದಿಂದ ದಿನಕ್ಕೆ ಕ್ಷೇತವ್ರು ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದು ಈ ಎರಡು ವರ್ಷಗಳ ಹಿಂದೆ ಚೀನಕೇರಾ ಕ್ರಾಸನಲ್ಲಿ ಮಹಾದ್ವಾರ ನಿರ್ಮಾಣ ಮಾಡಬೇಕೆಂದು ನಾವು ಕರೆ ಕೊಟ್ಟಿದ್ದೇವು. ಆ ಹಿನ್ನಲೆಯಲ್ಲಿ ಉತ್ಸಾಯಿಗಳಾದ ಭಕ್ತರು ಬಸಯ್ಯ ಸ್ವಾಮಿ ಅವರ ಮುಂದಾಳತ್ವದಲ್ಲಿ ಭಕ್ತರೆಲ್ಲರೂ ಕೂಡಿ ಬೃಹತ ಮಹಾದ್ವಾರವನ್ನು ನಿರ್ಮಾಣ ಮಾಡಿರುವುದು ಅಭಿಮಾನ ತಂದಿದೆ ಅಲ್ಲದೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದ ಶ್ರೀಗಳು ನಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲಿ ರೇವಣಸಿದ್ಧೇಶ್ವರ ದೇವಸ್ಥಾನಗಳಿವೆಯೋ ಅಲ್ಲಲ್ಲಿ ಮಹಾದ್ವಾರ ನಿರ್ಮಾಣ ಮಾಡಬೇಕೆಂದು ಮತ್ತು ಅಂತಹ ಕಡೆಗಳಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಸರ್ಕಲ್ ನಿರ್ಮಾಣ ಮಾಡಬೇಕೆಂದು ಶ್ರೀಗಳು ಕರೆ ನೀಡಿದರು.
ಮಹಾದ್ವಾರದ ರೂವಾರಿ ಬಸಯ್ಯ ಸ್ವಾಮಿ ಮತ್ತು ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶಿವಯ್ಯ ಸ್ವಾಮಿ ಅವರಿಗೆ ಶ್ರೀಗಳು ಶಾಲು ಹೊದಿಸಿ ಸತ್ಕರಿಸಿದರು.
ದುರೀಣರಾದ ಚಂದ್ರಕಾಂತ ಸ್ವಾಮಿ ಚಂದನಹಳ್ಳಿ, ಪೀರಪ್ಪ ಕಿಣಗಿ, ದಯಾನಂದ ಸ್ವಾಮಿ, ಕಮಲಾಕರ್ ಬಿರಾದಾರ, ಪರಮೇಶ್ವರ ಬಿರಾದಾರ, ರಾಜು ಪತ್ರಿ, ಬಸವರಾಜ ಬಿರಾದಾರ, ಹಣುಮಂತ ಪಾಂಚಾಳ ಮುಂತಾದವರು ಇದ್ದರು.