ವಿವೇಕದ ಬೆಳಕು, ತರ್ಕಬದ್ದ ವಿಚಾರದಿಂದ ಬದುಕು ಸುಂದರ : ಹಾರಕೂಡ ಶ್ರೀ
ಬೀದರ್:ಜೂ.8: ವಿವೇಕದ ಬೆಳಕು ತರ್ಕಬದ್ದ ವಿಚಾರದಿಂದ ಬದುಕು ಸುಂದರಗೊಳ್ಳುತ್ತದೆ, ಬದುಕಿನ ಸವಾಲುಗಳನ್ನು ತರ್ಕದಿಂದ ಭಟ್ಟಿ ಇಳಿಸಿದಾಗ ಸುಲಲಿತ ಮಾರ್ಗ ರೂಪುಗೊಳ್ಳುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಸಿರಗಾಪುರ ಗ್ರಾಮಸ್ಥರಿಂದ ಏರ್ಪಡಿಸಿದ ಭಕ್ತಿ ನಮನ ಹಾಗೂ 655ನೇ ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿದ ಶ್ರೀಗಳು ಬದುಕು, ಜೀವಿಸುವಿಕೆಗಿಂತ ಭಿನ್ನವಾಗಿದ್ದು, ಸತ್ವಭರಿತ ಮಜಲನ್ನು ತಲುಪಬೇಕಾದರೆ ಭಕ್ತಿಯ ಅಡಿಗಲ್ಲು ಗಟ್ಟಿಯಾಗಿರಬೇಕು.
ಅರ್ಥವಿಲ್ಲದ ಚಿಂತೆಯಿಂದ ಆಲೋಚನಾ ಶಕ್ತಿ ಕುಗ್ಗುವುದಲ್ಲದೆ, ಬದುಕಿನ ಸೌಂದರ್ಯ ಮಾಸುತ್ತದೆ.
ಆನಂದ ಸೌಧ ಕುಸಿಯುತ್ತದೆ.
ಪ್ರತಿದಿನ ಪ್ರತಿಕ್ಷಣ ಜೀವನೋತ್ಸಾಹ ಹೊನಲಾಗಿ ಹರಿಯುತ್ತಿರಬೇಕು.
ನಮ್ಮಲ್ಲಿನ ಉತ್ಸಾಹದ ಚಿಲುಮೆ ಸುತ್ತಲಿನ ಪರಿಸರ ಅಲ್ಹಾದಗೊಳಿಸುವಂತಿರಬೇಕು.
ವಸುಂಧರೆಗರ್ಪಿಸಿದ ಒಂದು ಕಾಳು ತೆನಯಾಗಿ ರೂಪುಗೊಳ್ಳುವಂತೆ ಗುರುವಿಗರ್ಪಿಸಿದ ಭಕ್ತಿ ನಮನ ಪ್ರತಿಯೊಬ್ಬರ ಬಾಳು ಸ್ವರ್ಣ ಫಲವಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ.
ಯಾವತ್ತೂ ಭಕ್ತಿ ಮಾರ್ಗವನ್ನೇ ಅನುಸರಿಸುತ್ತಿರುವ ಸಿರಗಾಪುರದ ಪ್ರತಿ ಮನೆಯಲ್ಲಿ ಬೆಳ್ಳಿ ತೊಟ್ಟಿಲು ತೂಗುವಂತಾಗಲಿ ಎಂದು ಹಾರೈಸಿದರು.
ರಾಜಕುಮಾರ ಬಿರಾದಾರ ಸಿರಗಾಪುರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಬಸವರಾಜ ಪೆÇಲೀಸ್ ಪಾಟೀಲ,ನಿವೃತ್ತ ತಹಶೀಲ್ದಾರರಾದ ಶರಣಬಸಪ್ಪ ಮುಡಬಿ, ಧೂಳಪ್ಪ ರೆಡ್ಡಿ ಸೇಳ್ಕೆ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಸಂತೋಷ ಕುಮಾರ ಯಾಚೆ ಕಾರ್ಯಕ್ರಮವನ್ನು ನಿರೂಪಿಸಿದರು.
ಮಹಾಂತಪ್ಪ ಶ್ರೀಚೆಂದ ವಂದಿಸಿದರು.