ಕೂಡ್ಲಿಗಿಯಲ್ಲಿ ಕಿರಿದಾದ ರಸ್ತೆ,ಅಡ್ಡಾದಿಡ್ಡಿ ನಿಲ್ಲುವ ವಾಹನಗಳು, ಟ್ರಾಫಿಕ್  ಜಾಮ್ ಕಿರಿಕಿರಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 8 :- ಪಟ್ಟಣದಲ್ಲಿರುವ ಬೆಂಗಳೂರು ರಸ್ತೆ, ಸಂಡೂರು ರಸ್ತೆ ಹಾಗೂ ಹೊಸಪೇಟೆ ರಸ್ತೆಗಳು ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದೂ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಇತ್ತೀಚಿಗೆ ಟ್ರಾಫಿಕ್ ಜಾಮ್ ಕಿರಿಕಿರಿ ಜಾಸ್ತಿಯಾಗಿದೆ.
ಇದು ಒಂದು ದಿನದ ಗೋಳಲ್ಲ ದಿನನಿತ್ಯ ಕಂಡುಬರುವ ನೈಜ ಚಿತ್ರಣವಾಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಬೆಂಗಳೂರು ರಸ್ತೆ :  ಈ ರಸ್ತೆಯಲ್ಲಿ ಖಾಸಗಿ ವಾಹನಗಳು ಹಾಗೂ ಗ್ರಾಮೀಣ ಭಾಗಕ್ಕೆ ಹೋಗುವ ಆಟೋಗಳ ನಿಲುಗಡೆ ಹಾಗೂ ರಸ್ತೆ ಪಕ್ಕದಲ್ಲಿ ಅಂಗಡಿಗಳಿಗೆ ಹಾಗೂ ಬೇರೆ ಊರಿಗೆ ಕಳುಹಿಸಲು ಸಂಬಂಧಿಗಳನ್ನು ಕರೆದುಕೊಂಡು ಬಂದ ಬೈಕನ್ನು ರಸ್ತೆಯ ಇಕ್ಕೆಲಾಗಳಲ್ಲಿ ನಿಲ್ಲಿಸಿದಾಗ ಮತ್ತು ಎದುರಿಗೆ ಬರುವ ವಾಹನಗಳು ದಾಟುವುದೇ ಒಂದು ಹರಸಾಹಸ ವಾಹನಗಳು ಸಂಚಾರದಲ್ಲಿ ಇಷ್ಟು ಕಷ್ಟ ಎನಿಸಿದರೆ ಇನ್ನು ಪಾದಚಾರಿಗಳ ಗತಿ ಎಷ್ಟರ ಮಟ್ಟಿಗೆ ಇದೇ ಎಂದು ಊಹಿಸಿಕೊಳ್ಳಲು ಅಸಾಧ್ಯವೇ ಸರಿ ಇಷ್ಟು ಶನಿವಾರದಿಂದ ಗುರುವಾರದ ಸಮಸ್ಯೆಯಾದರೆ ಇನ್ನು ಶುಕ್ರವಾರ ವಾರದ ಸಂತೆಯ ದಿನ ಇದೇ ರಸ್ತೆಯಲ್ಲಿ ವಾರದ ಸಂತೆ ಜರುಗುತ್ತಿದ್ದು ಅಂದು ವಾಹನ ಸಂಚಾರಕ್ಕೆ ಕಿರಿಕಿರಿ ಎನಿಸಿದರೆ ಪಾದಚಾರಿಗಳು ಇನ್ನು ರಸ್ತೆ ದಾಟುವುದಾದರೆ  ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡೆ ಸಾಗಬೇಕು ಎನ್ನುವ ಪರಿಸ್ಥಿತಿ ಇದೆ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ದಿನನಿತ್ಯದ ಗೋಳೆಂದು ಹೇಳಬಹುದಾಗಿದೆ.
ಸಂಡೂರು ರಸ್ತೆ : ಪಟ್ಟಣದ  ಅಂಬೇಡ್ಕರ್ ವೃತ್ತದಿಂದ ಸಂಡೂರು ಬಳ್ಳಾರಿ ಕಡೆಗೆ ಹೋಗುವ ರಸ್ತೆಯಂತೂ ರಸ್ತೆಯ ಇಕ್ಕೆಲಾಗಳಲ್ಲಿ ಬೀದಿಬದಿಯಲ್ಲಿ ಎಗ್ ರೈಸ್ ಬಂಡಿಗಳು, ಪಾನಿಪುರಿ ಬಂಡಿಗಳು ಇದ್ದು ಅಲ್ಲಿಗೆ ಬರುವ ಗ್ರಾಹಕರು ರಸ್ತೆ ಪಕ್ಕದಲ್ಲೇ ಬೈಕ್ ನಿಲ್ಲಿಸಿ ತಿಂಡಿ ತಿನಿಸು ತಿನ್ನಲು ಬರುತಿದ್ದು  ಇದೇ ರಸ್ತೆಯಲ್ಲಿ ಸಂಡೂರು, ಜಿಂದಾಲ್ ಕಡೆ ಹೋಗುವ ಭಾರಿ ಗಾತ್ರದ ಮೈನ್ಸ್ ತುಂಬಿದ ಹಾಗೂ ಕಬ್ಬಿಣವನ್ನು ಹೊಟ್ಟುತರುವ  ಉದ್ದನೆಯ ಲಾರಿಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಕಿರಿದಾದ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ ಎನಿಸುತ್ತಿದೆ ಅಲ್ಲದೆ ಇದೇ ರಸ್ತೆಯಲ್ಲಿ ಸಂತ ಮೈಕಲ್ ಶಾಲೆ, ಜ್ಞಾನಭಾರತಿ ಶಾಲೆ ಹಾಗೂ ಕಾಲೇಜ್ ಗಳಿದ್ದು ವಿದ್ಯಾರ್ಥಿಗಳ ಓಡಾಟವು ಜೀವದ ಮೇಲೆ ಭಯದ ವಾತಾವರಣದಲ್ಲಿ ಸಾಗುತಿದ್ದಾರೆ ಮತ್ತು ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕ ಹಾಗೂ ಬಸ್ ನಿಲ್ದಾಣ, ಪೊಲೀಸ್ ಠಾಣೆ ಸಹ ಇದೇ ರಸ್ತೆಯಲ್ಲಿವೆ ಮತ್ತು ತಾಲೂಕು ಕಚೇರಿ, ಕೋರ್ಟ್ ಗೆ ಬಂದಿರುವ ಜನತೆಯು  ಜೆರಾಕ್ಸ್ ಹಾಗೂ ಫೋಟೋ ಬೇಕಾದರೆ ಸ್ಟುಡಿಯೋ ಸಹ ಇದೇ ರಸ್ತೆಯಲ್ಲಿದ್ದು ರಸ್ತೆಯ ಇಕ್ಕೆಲಾಗಳಲ್ಲಿ ನಿಲ್ಲುವ ಬೈಕಿನಿಂದ ಜನರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತದೆ ಇವುಗಳ ನಿಯಂತ್ರಣವಾಗಬೇಕಾಗಿದೆ ಅಲ್ಲದೆ ಈ ರಸ್ತೆ ಅಗಲೀಕರಣವಾಗಬೇಕಿದೆ ಎನ್ನುತ್ತಾರೆ ಕೆಲವರು.
ಹೊಸಪೇಟೆ ರಸ್ತೆ : ಪಟ್ಟಣದ ಮದಕರಿ ವೃತ್ತದಿಂದ ಈ ರಸ್ತೆಗೆ ಸಾಗಬೇಕೆಂದರೆ ಮೊದಲ ಸಮಸ್ಯೆ ಕಿರಿದಾದ ರಸ್ತೆ, ಪಟ್ಟಣದ ಹಳೇ ಊರಿಗೆ ಹೋಗುವ ಮುಖ್ಯ ರಸ್ತೆಯಾಗಿದೆ ಇದೇ ದಾರಿಯಲ್ಲಿ ಸಮಾಜಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ ಹಾಗೂ ಪಶುವೈದ್ಯ ಇಲಾಖೆಗಳಿಗೆ ಹೋಗಲು ಇದೇ ರಸ್ತೆಯನ್ನೇ ಕ್ರಮಿಸಬೇಕು ಮತ್ತು ರಾಜೀವಗಾಂಧಿ ನಗರ ಸಹ ಈ ಕಡೆ ಬರುತಿದ್ದು ಕಿರಿದಾದ ರಸ್ತೆಯಲ್ಲಿ ಬಸ್ ಸಂಚಾರ ಮುಕ್ಕಾಲು ಭಾಗ ನಿಂತಿದ್ದು ಪಟ್ಟಣದ  ಹೊಸಪೇಟೆ ರಸ್ತೆಯ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರದ ಜನತೆಗೆ ಹಾಗೂ ರಾಜೀವಗಾಂಧಿ ನಗರದ ಜನತೆ ಹೊಸಪೇಟೆ ಕಡೆಗೆ ಪ್ರಯಾಣ ಬೆಳೆಸಬೇಕೆಂದರೆ ಪಟ್ಟಣದ ಮದಕರಿ ವೃತ್ತಕ್ಕೆ ಆಟೋದಲ್ಲಿ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಅನೇಕ ಬಾರಿ ಜನರು ತಮ್ಮ ಸಮಸ್ಯೆಗಳ ಬಗ್ಗೆ ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕಾಧಿಕಾರಿಗೆ ಬಸ್ ಈ ರಸ್ತೆ ಕಡೆ ಬರಬೇಕು ಎಂದು ಮನವಿ ಮಾಡಿದರು ಪ್ರಯೋಜನವಾಗದೆ ಅನೇಕ ಸಾರಿಗೆ ಸಂಸ್ಥೆ ವಾಹನಗಳು ಹೊಸಪೇಟೆ ರಸ್ತೆಕಡೆ ಬರದೇ ಕೊಟ್ಟೂರು ರಸ್ತೆಗೆ ಸಾಗಿ ಅಲ್ಲಿ ಬರುವ ಬೈಪಾಸ್ ರಸ್ತೆಯೊಂದ ಹೈವೇ 50ರಸ್ತೆಗೆ ಸಾಗಿ ಹೋಗುತ್ತಿವೆ ಇದಕ್ಕೆ ಮೂಲ ಕಾರಣ ಕಿರಿದಾದ ರಸ್ತೆಯಿಂದ ಬಸ್ ಬರದೇ ಇರುವುದು ಎನ್ನುತ್ತಾರೆ ಚಾಲಕರು.
ಇಂತಹ ಜನಸಂದಣಿ ಹಾಗೂ ಕಿರಿದಾದ  ರಸ್ತೆಗಳಿಂದ ಮುಕ್ತಿ ಯಾವಾಗ ದೊರಯಲಿದೆ, ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಜನತೆ ಬೇಸತ್ತಿದ್ದೂ ಸಂಬಂದಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಮುಂದಾಗಿ  ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಮುಕ್ತಿ ದೊರಕಿಸುವಂತೆ ಪ್ರಜ್ಞಾವಂತರು ಮನವಿ ಮಾಡುತ್ತಿದ್ದಾರೆ.