ಸಿಳ್ಳೆಕ್ಯಾತ ಸಮುದಾಯದ ಮದುವೆ ಆಚರಣೆಯಲ್ಲಿಬಳಕೆಗೊಳ್ಳುತ್ತಿರುವ ಪದಗಳ ಸಾಂಸ್ಕೃತಿಕ ಸ್ವರೂಪ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ8: ಆಚರಣೆಗಳು, ವಿಧಿ-ವಿಧಾನಗಳು, ನಂಬಿಕೆ-ನಿಷೇಧಗಳು ಸಮುದಾಯದಿಂದ ಸಮುದಾಯಕ್ಕೆ ಭಿನ್ನತೆ ಇದೆ ಎಂದು ಸಂಶೋಧಕಿ ಅಂಬಿಕಾ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗ ಹಮ್ಮಿಕೊಂಡಿದ್ದ 253ನೇ ಆನ್‍ಲೈನ್ ವಾರದಮಾತು ಕಾರ್ಯಕ್ರಮದಲ್ಲಿ “ಸಿಳ್ಳೆಕ್ಯಾತ ಸಮುದಾಯದ ಮದುವೆ ಆಚರಣೆಯಲ್ಲಿ ಬಳಕೆಗೊಳ್ಳುತ್ತಿರುವ ಪದಗಳ ಸಾಂಸ್ಕೃತಿಕ ಸ್ವರೂಪ” ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ವಿವಾಹ ಎನ್ನುವುದು ಮಾನವನ ಲೈಂಗಿಕ ಜೀವನ ಸಂಬಂಧಗಳಿಗೆ ಸೀಮಿತವಾಗದೇ ಕುಟುಂಬ ವ್ಯವಸ್ಥೆಯ ಮಾದರಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಮದುವೆ ಆಚರಣೆಯು ಎಲ್ಲಾ ಧರ್ಮ, ಜಾತಿ ಸಮುದಾಯಗಳಲ್ಲಿ ಭಿನ್ನ ಮಾದರಿಯಲ್ಲಿರುತ್ತದೆ. ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಸಿಳ್ಳೆಕ್ಯಾತ ಸಮುದಾಯದಲ್ಲಿ ಹದಿನೆಂಟು ಬೆಡಗುಗಳಿವೆ. ಉದಾ. ಅಟಕ್, ನೇಕನಾರ್, ಪಾಚಂಗೆ, ಸಾಸನೀಕ್, ಸಿಂಧ್ಯಾ, ಅವೇಟ್ ಮುಂತಾದವು.. ಇದರ ಮೇಲೆ ಮದುವೆಯನ್ನು ನಿಶ್ಚಯ ಮಾಡುತ್ತಾರೆ. ‘ಮನೆ ಈರ’್ಲ, ‘ದೇವರೂಟ’, ‘ಮಾನ್ಪಾನ್’, ‘ಮನೆಜಂಬ್ರ’ ಎಂಬ ವಿಶೇಷ ಆಚರಣೆಗಳನ್ನು ಮದುವೆ ಸಂದರ್ಭದಲ್ಲಿ ಮಾಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಪಿ. ಮಹಾದೇವಯ್ಯ ಅವರು, ಸಂಶೋಧನಾ ವಿದ್ಯಾರ್ಥಿ ಚೆಂದಸ್ವಾಮಿ, ದಿನೇಶ್ ಎಸ್., ದೀಪಾ ಅವರು ಪ್ರತಿಕ್ರಿಯೆ ನೀಡಿದರು. ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಅಶೋಕಕುಮಾರ ರಂಜೇರೆ, ಕಾರ್ಯಕ್ರಮದ ಸಂಚಾಲಕ ಚೌಡಪ್ಪ ಪಿ., ಶಿಲ್ಪಾ ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾ ವಿದ್ಯಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.