ಮರಣವೇ ಮಹಾನವಮಿ ಯಶಸ್ವಿಗೊಳಿಸಿ
ಭಾಲ್ಕಿ:ಸೆ.೨೫:ಪಟ್ಟಣದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಅ.೨ ರಿಂದ ಅ.೧೨ರ ವರೆಗೆ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ಕಲ್ಯಾಣ ಕ್ರಾಂತಿ ಕಾಲ ಸ್ಮರಣೀಯ. ಮಹಾನವಮಿ, ದಸರಾ ದಿನ ಕ್ರಾಂತಿ ನಡೆದಿದೆ. ಸಮಾನತೆಯ, ಸುಖಿಸಮಾಜ ನಿರ್ಮಾಣದ ಉದ್ದೇಶ ಶರಣರದಾಗಿತ್ತು.
ಹೀಗಾಗಿ ಮರಣವೇ ಮಹಾನವಮಿ ಅಂಗವಾಗಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮರಣವೇ ಮಹಾನವಮಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಚಿನ್ನಮ್ಮ ಬಾವುಗೆ ಸೇರಿದಂತೆ ಹಲವರು ಇದ್ದರು.
ಸೇವಾ ಸಮಿತಿ ಅಧ್ಯಕ್ಷರಾಗಿ ಚಂದ್ರಕಲಾ ಡಿಗ್ಗೆ ಆಯ್ಕೆ
ಇದೇ ವೇಳೆ ಮರಣವೇ ಮಹಾನವಮಿ ಸೇವಾ ಸಮಿತಿ ಅಧ್ಯಕ್ಷರನ್ನಾಗಿ ಚಂದ್ರಕಲಾ ಪ್ರಭು ಡಿಗ್ಗೆ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರನ್ನು ಪೂಜ್ಯರು ಸನ್ಮಾನಿಸಿ, ಶುಭ ಕೋರಿದರು.
ಮರಣವೇ ಮಹಾನವಮಿ, ಕಲ್ಯಾಣ ಕ್ರಾಂತಿ ವಿಜಯೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಚಂದ್ರಕಲಾ ಪ್ರಭು ಡಿಗ್ಗೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅವರಿಗೆ ಅಕ್ಕನ ಬಳಗ ಸೇರಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಹಕರಿಸಿ ಮರಣವೇ ಮಹಾನವಮಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.