ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತಿ ಮುಖ್ಯ: ಸಿ.ಬಿ. ಕುಂಬಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.8: ಪ್ರಸ್ತುತ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತೀ ಮುಖ್ಯ. ಅದು ಇಲ್ಲದೇ ಇದ್ದರೆ ಅಂಥವರನ್ನು ಕಂಪ್ಯೂಟರ್ ಅನಕ್ಷರಸ್ಥರೆಂದು ಕರೆಯಲಾಗುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಕುಂಬಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಐಐಎಸ್‍ಸಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಐದು ದಿನಗಳ “ಗ್ರಾಫಿಕ್ ಡಿಸೈನಿಂಗ್ ಕೌಶಲ್ಯ” ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಒಂದು ಕೆಲಸಕ್ಕೆ ಸೇರಬೇಕೆಂದರೆ ಹಲವಾರು ಕೌಶಲ್ಯಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾಗುತ್ತದೆ. ಇಂತಹ ಕಾರ್ಯಾಗಾರಗಳು ನಿಮ್ಮ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿವೆ. ಇನ್ನು 2018 ರಲ್ಲಿ ಕರ್ನಾಟಕ ಸರಕಾರ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ವಿದ್ಯಾರ್ಥಿಗಳಿಗಾಗಿ, ಮಹಿಳೆಯರಿಗಾಗಿ ನೂರಾರು ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಇಂತಹ ತರಬೇತಿಗಳಲ್ಲಿ ಭಾಗಿಯಾದವರು ತಮ್ಮ ಜೀವನವನ್ನು ಅತ್ಯುತ್ತಮವಾಗಿ ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪÀತಿ ಪ್ರೊ. ಬಿ.ಕೆ. ತುಳಸಿಮಾಲ ಮಾತನಾಡಿ, ಸುಸ್ಥಿರ ಜೀವನದಲ್ಲಿ ಕೌಶಲ್ಯ ಅಭಿವೃದ್ಧಿಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯಕ. ಪ್ರಸ್ತುತ ದಿನಮಾನದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸಾಕಷ್ಟು ಅಭಿವೃದ್ಧಿಯನ್ನು ನಮ್ಮ ದೇಶ ಹೊಂದಿದ್ದರು, ಇಂತಹ ಕೌಶಲ್ಯ ಅಭಿವೃದ್ಧಿ ತರಬೇತಿಗಳ ಉಪಯೋಗವನ್ನು ಯುವ ಜನತೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಗ್ರಾಫಿಕ್ ಡಿಸೈನಿಂಗ್‍ನಲ್ಲಿ ಶೇ. 4-5 ರಷ್ಟು ಬೆಳೆವಣಿಗೆಯನ್ನು ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.
ಪದವಿ ಶಿಕ್ಷಣ ಜೊತೆಗೆ ಪೂರಕವಾದ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಇಂತಹ ಕಾರ್ಯಾಗಾರಗಳು ಉಪಯೋಗವಾಗಲಿವೆ. ಜಿಲ್ಲಾ ಪಂಚಾಯತಿ ನೀಡುವ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಜಾವಾಣಿ ದಿನಪತ್ರಿಕೆಯ ಪುಟವಿನ್ಯಾಸಗಾರ ಮಂಜುನಾಥ ಹುಲಕೊಪ್ಪದ, ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ್, ವಿವಿಧ ಜಿಲ್ಲೆಯ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ವಿವಿಯ ವಿವಿಧ ವಿಭಾಗಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು, ಸಂಶೋಧನಾ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಲ್ಲಿ ಪುಟವಿನ್ಯಾಸ, ಇನ್ವಿಟೆಷನ್ ಕಾರ್ಡ್‍ಗಳನ್ನು ಉತ್ತಮವಾಗಿ ಮಾಡಿದ ವಿದ್ಯಾರ್ಥಿನಿಯರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ಎಂಜಿನಿಯರ್, ಕೆಎಸ್‍ಸಿಎಸ್‍ಟಿ ಮತ್ತು ಕೋರ್ಸ್ ಸಂಯೋಜಕ ಗಂಗಾಧರಪ್ಪ ಆರ್ ಸ್ವಾಗತಿಸಿದರು, ಕಾರ್ಯಾಗಾರದ ನಿರ್ದೇಶಕ ಸಂದೀಪ ವರದಿ ವಾಚನ ಮಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ವಂದಿಸಿದರು.