ವೇದ ಅಕಾಡೆಮಿ ಎರಡನೇ ಶಾಖೆ ಉದ್ಘಾಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.8:ಸೈನಿಕ, ನವೋದಯ, ಕಿತ್ತೂರ ಮೊದಲಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ನೀಡುವ ಮೂಲಕ ಪ್ರಸಿದ್ಧಿ ಪಡೆದಿರುವ ವೇದ ಅಕಾಡೆಮಿ ಎರಡನೇ ಶಾಖೆ ಇಲ್ಲಿನ ಗಣೇಶ ನಗರದಲ್ಲಿ ಆರಂಭಗೊಂಡಿತು.
ಈ ಶಾಖೆಯನ್ನು ಲೋಕಾರ್ಪಣೆಗೊಳಿಸಿದ ಯರನಾಳ ವಿರಕ್ತಮಠದ ಶ್ರೀ ಗುರುಸಂಗನಬಸವ ಸ್ವಾಮೀಜಿ ಆಶೀವರ್ಚನ ನೀಡಿ, ಶಿಕ್ಷಣ ಎಂಬುದು ಬಾಳಿನ ದಿವ್ಯ ಬೆಳಕು, ಈ ಬೆಳಕು ಪ್ರತಿಯೊಬ್ಬರ ಬದುಕನ್ನು ಬೆಳಗಿಸುತ್ತದೆ, ಭವಿಷ್ಯವನ್ನು ಉಜ್ವಲಗೊಳಿಸುತ್ತದೆ, ಹೀಗಾಗಿ ಶಿಕ್ಷಣ ಪ್ರಸಾರ ಒಂದು ಪವಿತ್ರವಾದ ಕಾರ್ಯವಾಗಿದೆ ಎಂದರು. ಅನೇಕ ವರ್ಷಗಳಿಂದ ನವೋದಯ ಮೊದಲಾದ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆಗೆ ಮಾರ್ಗದರ್ಶಿ ತರಬೇತಿ ನೀಡುವ ವೇದ ಅಕಾಡೆಮಿ ಗಣೇಶ ನಗರ ಭಾಗದಲ್ಲಿ ನೂತನ ಶಾಖೆ ತಲೆ ಎತ್ತಿರುವುದು ಈ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ, ಈ ರೀತಿಯ ಜ್ಞಾನ ಉಣಬಡಿಸುವ ಕಾರ್ಯ ಮುಂದುವರೆಸಲಿ ಎಂದು ಹಾರೈಸಿದರು.
ಕೃಷ್ಣಾ ಕಾಡಾ ಮಾಜಿ ನಿರ್ದೇಶಕ ರವಿ ಖಾನಾಪೂರ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು, ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳಿಗಾಗಿ ಅಮೂಲ್ಯವಾದ ಶಿಕ್ಷಣವನ್ನು ನೀಡಬೇಕು, ಜ್ಞಾನ ಎಂಬುದು ಯಾರೂ ಕಸಿದುಕೊಳ್ಳಲಾಗದ ಆಸ್ತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ ಮಾತನಾಡಿ, ಪ್ರತಿ ಮಗುವಿನಲ್ಲಿಯೂ ಪ್ರತಿಭೆ ಇದೆ, ಪ್ರತಿಭೆ ಗುರುತಿಸಿ ಪ್ರಕಾಶಿಸುವಂತೆ ಮಾಡುವುದು ಶಿಕ್ಷಣ ಸಂಸ್ಥೆಯ ಹಾಗೂ ಶಿಕ್ಷಕರ ಕರ್ತವ್ಯ, ಈ ಕರ್ತವ್ಯವನ್ನು ನಿಭಾಯಿಸಿ ಜ್ಞಾನ ಪಸರಿಸುವ ಸಂಕಲ್ಪದೊಂದಿಗೆ ನೂತನ ಶಾಖೆ ಆರಂಭಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆ ಉಪಾಧ್ಯಕ್ಷ ದಯಾನಂದ ಕೆಲೂರ, ವಿಶ್ರಾಂತ ಡಿವೈಎಸ್ಪಿ ಬಸವರಾಜ ಚೌಕಿಮಠ ಮಾತನಾಡಿದರು.
ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಕುಮಾರ ಗಡಗಿ, ಶಿವರುದ್ರ ಬಾಗಲಕೋಟ, ಡಾ.ಬಾಬು ರಾಜೇಂದ್ರ ನಾಯಕ, ಡಾ.ಬಾಬು ಸಜ್ಜನ, ಸುಧೀರ ಚಿಂಚಲಿ ಪಾಲ್ಗೊಂಡಿದ್ದರು.