ಪ್ರವಾಹದ ಬಗ್ಗೆ ನಿರಂತರ ನಿಗಾ ವಹಿಸಿ
ಧಾರವಾಡ, ಜೂ8: ಜಿಲ್ಲೆಯಲ್ಲಿ ಮುಂಗಾರು ಪೂರ್ಣ ಆವರಿಸಿದ್ದು, ಮಳೆ ತೀವ್ರಗೊಳ್ಳುತ್ತಿದೆ. ಜಿಲ್ಲೆಯ ಎರಡು ಮುಖ್ಯ ಹಳ್ಳಗಳಾದ ತುಪ್ಪರಿ ಹಳ್ಳ ಮತ್ತು ಬೆಣ್ಣಿ ಹಳ್ಳದ ಪ್ರವಾಹದ ಬಗ್ಗೆ ನಿರಂತರ ನಿಗಾ ವಹಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಎರಡು ಹಳ್ಳಗಳಿಗೆ ಸಂಬಂಧಿಸಿದ ಪಿಡಿಓಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸ್ಥಾನಿಕವಾಗಿ ಕೇಂದ್ರ ಸ್ಥಾನದಲ್ಲಿದ್ದು, ತಾಲೂಕು ಆಡಳಿತಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನೀರಿನ ಮಟ್ಟದ ಏರಿಕೆ ಹಾಗೂ ಪ್ರವಾಹದ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಕುಡಿಯುವ ನೀರು ಸರಬರಾಜು: ಬರಗಾಲದ ಹಿನ್ನಲೆಯಲ್ಲಿ ಜಿಲ್ಲೆಯ 51 ಗ್ರಾಮಗಳಲ್ಲಿ 84 ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನಿರಂತರ ಮಳೆಯಿಂದಾಗಿ ಬೋರವೆಲ್‍ಗಳು ಪುನಃಚ್ಛೇತನ ಆಗುತ್ತವೆ. ಕೆರೆಗಳಿಗೆ ನೀರು ಬರುತ್ತಿದೆ. ಆದ್ದರಿಂದ ಮುಂದಿನ ದಿನಗಳ ಪರಿಶೀಲಿಸಿ, ಸ್ಥಳೀಯ ಸಂಸ್ಥೆಗಳ ಬೋರವೆಲ್ ರಿಚಾರ್ಜ್ ಆಗಿದ್ದರೆ, ಖಾಸಗಿ ಬೋರವೆಲ್ ಬಳಕೆ ಬಗ್ಗೆ ಪುನರ್ ಪರಿಶೀಲಿಸಬೇಕು. ಅಗತ್ಯವಿರುವ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಆಗುವವರೆಗೆ ಮುಂದುವರಿಸಲು ತಾಲೂಕು ಟಾಸ್ಕ್‍ಪೊರ್ಸ್‍ದಲ್ಲಿ ಚರ್ಚಿಸಿ, ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮೇವು ಕೆಂದ್ರ: ಧಾರವಾಡ ಎಪಿಎಂಸಿಯಲ್ಲಿನ ಮೇವು ಬ್ಯಾಂಕ್‍ದಲ್ಲಿ ಮಾತ್ರ ಮೇವು ಸರಬರಾಜುಗೆ ಬೇಡಿಕೆ ಇದ್ದು, ಅಲ್ಲಿ 100 ಟನ್ ಮೇವು ದಾಸ್ತಾನಿದೆ. ಉಳಿದಂತೆ ಜಿಲ್ಲೆಯ ಮೇವು ಬ್ಯಾಂಕಗಳಿಂದ ಮೇವು ಖರೀದಿಸಲು ಜನರ ಬೇಡಿಕೆ ಇಲ್ಲ. ಈಗಾಗಲೆ ಕೆಲವು ಕಡೆ ಹಸಿರು ಮೇವು ಲಭ್ಯವಾಗುತ್ತಿರುವದರಿಂದ ಮೇವಿನ ಬೇಡಿಕೆ ಕಡಿಮೆ ಆಗಿದೆ. ಸ್ಥಳೀಯ ಶಾಸಕರೊಂದಿಗೆ ಸಮಾಲೋಚಿಸಿ ಮೇವು ಬ್ಯಾಂಕ್ ಮುಂದುವರಿಕೆ ಬಗ್ಗೆ ಮುಂದಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.