ಯಶಸ್ವಿಯಾಗಿ ನಡೆದ ಬಸವಣ್ಣ ಜಯಂತೋತ್ಸವ
ಸಂಜೆವಾಣಿ ವಾರ್ತೆ
ನಂಜನಗೂಡು:ಜೂ.08: 100 ವರ್ಷಗಳ ಇತಿಹಾಸವಿರುವ ಇಲ್ಲಿನ ವಕೀಲರ ಸಂಘದಲ್ಲಿ ಇದೇ ಪ್ರಥಮ ಬಾರಿಗೆ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವವನ್ನು ಸಡಗರ ಸಂಭ್ರಮದಿಂದ ವಕೀಲರುಗಳು ಆಚರಿಸಿ ಜಯಂತಿ ಕಾರ್ಯಕ್ರಮಗಳಿಗೆ ಮಾದರಿಯಾದರು.
ಸಮಾರಂಭವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಡಿ.ಕಮಲಾಕ್ಷ ರವರು ಬಸವಣ್ಣ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಕ್ರಾಂತಿ ಈಗಲೂ ಕೂಡ ನಮ್ಮಗಳ ಜೀವನಕ್ಕೆ ಪ್ರಸ್ತುತವಾಗಿವೆ. ಕಾಯಕವೇ ಕೈಲಾಸ ಎಂಬ ವಚನದಿಂದ ಕೈಲಾಸವನ್ನು ನಮ್ಮ ಕೆಲಸದಿಂದಲೇ ಕಾಣಬಹುದು ಎಂದ ಅವರ ವಚನಗಳು ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ ಮಾದರಿಯಾಗಿವೆ ಎಂದರು. ಅಡುಗೆ ಕೋಣೆಗೆ ಸೀಮಿತರಾಗಿದ್ದ ಸ್ರ್ತೀಯರನ್ನು ಸಮಾನತೆಯಿಂದ ಕಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದರು. ಬಸವತತ್ವ ಪ್ರತಿಯೊಬ್ಬರೂ ಒಪ್ಪುವಂತಹ ತತ್ವವಾಗಿದ್ದು, ಬಸವಣ್ಣನವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಏನನ್ನು ಬೇಕಾದರು ಸಾಧಿಸಬಹುದು ಎಂದರು.
ಸಮಾರಂಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಘುರಾಂ ರವರು ಮಾತನಾಡಿ, ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುವುದರ ಮೂಲಕ ಮಹಾನೀಯರ ಆಸೆ-ಆಕಾಂಕ್ಷಿಗಳು ಸಮಾಜವನ್ನು ಯಾವ ನಿಟ್ಟಿನಲ್ಲಿ ಕರೆದುಕೊಂಡು ಹೋಗಬೇಕು ಎಂಬ ಅಭಿಲಾಷೆ ಹೊಂದಿತ್ತು ಆ ರೀತಿಯಾಗಿ ನಾವೆಲ್ಲಾ ನಡೆದುಕೊಂಡಾಗ ನಿಜವಾಗಲೂ ಇಂತಹ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.
12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಹೇಳಿದ ಮಾತುಗಳು ಈಗ ಕಾನೂನಾಗಿ ಮಾರ್ಪಟ್ಟಿವೆ, ಅಂದು ಕಡಿಮೆ ಪ್ರಮಾಣದಲ್ಲಿ ಅಪರಾಧಗಳಿದ್ದರೆ ಇಂದು ಹೆಚ್ಚಿನ ಪ್ರಮಾಣದಲ್ಲಿ ಅಪರಾಧಗಳು ನಡೆಯುತ್ತಿವೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅಂದು ಬಸವಣ್ಣನವರು ವಚನ ರೂಪದಲ್ಲಿ ಹೇಳಿದ್ದು ಅದನ್ನೇ ಇಂದು ಕಾನೂನಾಗಿ ರಚನೆ ಮಾಡಲಾಗಿದೆ ಎಂದರು. ಬಸವಣ್ಣನವರ ದೇಯೋದ್ದೇಶಗಳು, ಪರಿಕಲ್ಪನೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಸಮಾರಂಭದಲ್ಲಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕಿಶೋರ್‍ಕುಮಾರ್ ರವರು ಮಾತನಾಡಿ 12ನೇ ಶತಮಾನದ ದಾರ್ಶನಿಕ ಬಸವಣ್ಣನವರು ಮಾನವ ಹಕ್ಕುಗಳ ಬಗ್ಗೆ 12ನೇ ಶತಮಾದನಲ್ಲಿ ಸಾಕಷ್ಟು ತಿಳಿಸಿದ್ದರು. ಬಸವಣ್ಣನವರ ಕಾಲದಲ್ಲಿ ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ರಚಿಸಿದ್ದರು ಜೊತೆಗೆ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ನೀಡಿದವರು ಬಸವಣ್ಣನವರು ಎಂದರು.
ಮುಖ್ಯ ಭಾಷಣಕಾರರಾಗಿದ್ದ ಜೆಎಸ್‍ಎಸ್ ಸಂಸ್ಥೆಯ ನಿ|| ಪ್ರೊ. ಸದಾಶಿವ ರವರು ಮಾತನಾಡಿ, ಈ ವರ್ಷದ ಬಸವ ಜಯಂತಿ ವಿಶೇಷವಾಗಿದ್ದು ಕರ್ನಾಟಕದ ಘನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ವೀರಶೈವ ಲಿಂಗಾಯತ ಮಠಾಧ್ಯಕ್ಷರುಗಳು ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ರವರ ಒತ್ತಾಯದ ಮೇರೆಗೆ ಬಸವಣ್ಣನವರನ್ನು ವಿಶ್ವಗುರು ಕರ್ನಾಟಕದ ಸಾಂಸ್ಕøತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸುರೇಶ್ ರವರು ಮಾತನಾಡಿ ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಮಹನೀಯರುಗಳ ಜಯಂತಿ ಮಹೋತ್ಸವಗಳನ್ನು ಯಶಸ್ವಿಯಾಗಿ ಆಚರಿಸುತ್ತಿರುವ ವಕೀಲ ವೃಂದದವರಿಗೆ ಅಭಿನಂದನೆ ಎಂದರು.
ಪ್ರಾರಂಭದಲ್ಲಿ ಮನು ಮಂಜುನಾಥ್ ವೃಂದವರಿಂದ ವಚನಗಾಯನದ ಮೂಲಕ ಪ್ರಾರ್ಥನೆ ನಡೆಯಿತು. ಹಿರಿಯ ವಕೀಲ ನಂಜುಂಡಸ್ವಾಮಿ ಸ್ವಾಗತಿಸಿದ ಸಭೆಗೆ. ಹಿರಿಯ ವಕೀಲ ಹೆಜ್ಜಿಗೆ ನಾಗೆಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೇಣುಕಾ ಪ್ರಸಾದ್ ವಂದಿಸಿದರು. ಸಮಾರಂಭದಲ್ಲಿ ವಕೀಲರುಗಳ ಸಂಘದ ಹಿರಿಯ ಮತ್ತು ಕಿರಿಯ ವಕೀಲರುಗಳು ಭಾಗವಹಿಸಿದ್ದರು.