ನೈ.ಪದವೀಧರ ಕ್ಷೇತ್ರ: ಧನಂಜಯ ಸರ್ಜಿ ಜಯಭೇರಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.08:- ಬಿಜೆಪಿಯ ಭದ್ರಕೋಟೆ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ (ಚನ್ನಗಿರಿ ಹೊನ್ನಾಳಿ ತಾಲೂಕು ಮಾತ್ರ) ಜಿಲ್ಲೆಗಳ ನ್ನೊಳಗೊಂಡ ನೈಋತ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ 8 ಪ್ರಾರಂಭಗೊಂಡು ಮಧ್ಯರಾತ್ರಿ 12.30ಕ್ಕೆ ಫಲಿತಾಂಶ ಹೊರಬಿತ್ತು. ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ 37,627 ಮತಗಳನ್ನು, ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ 13,516 ಮತಗಳನ್ನು, ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಕೆ.ರಘುಪತಿ ಭಟ್ 7,039, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ 2,518 ಮತಗಳನ್ನು ಪಡೆದರು. ಧನಂಜಯ ಸರ್ಜಿ 24,111 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸತತ ಏಳನೇ ಬಾರಿ ಗೆಲುವಿನ ನಗೆ ಬೀರಿತು. ರಘುಪತಿ ಭಟ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಬಿಜೆಪಿಯ ಗೆಲುವಿನ ಓಟಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ.
ಒಟ್ಟು 66,497 ಮತಗಳು ಚಲಾವಣೆಯಾಗಿತ್ತು. 5,115 ಮತಗಳು ಕುಲಗೆಟ್ಟವು. ಉಳಿಕೆ 61,382 ಮತಗಳು ಸಿಂಧುವಾಗಿತ್ತು. ಹೀಗಾಗಿ ಗೆಲುವಿಗೆ 30,692 ಖೋಟಾ ನಿಗದಿ ಮಾಡಲಾಯಿತು. ನಿಗದಿಪಡಿಸಿದ್ದ ಖೋಟಾ ಮತಗಳಿಗಿಂತ ಹೆಚ್ಚಿನ ಪ್ರಮಾಣದ ಮತಗಳನ್ನು ಧನಂಜಯ ಸರ್ಜಿ ಮೊದಲ ಪ್ರಾಶಸ್ತ್ಯ ಮತದಲ್ಲೇ ಪಡೆಯುವ ಮೂಲಕ ದಿಗ್ವಿಜಯ ಸಾಧಿಸಿದರು.
ಸುತ್ತುವಾರು ಮತಗಳಿಕೆ: ಒಟ್ಟು ನಾಲ್ಕು ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಪ್ರತಿ ಸುತ್ತಿನಲ್ಲೂ ಧನಂಜಯ ಸರ್ಜಿ ಮುನ್ನಡೆ ಕಾಯ್ದುಕೊಂಡು ಬಂದರು. ಮೊದಲ ಸುತ್ತಿನಲ್ಲಿ ಬಿಜೆಪಿಯ ಧನಂಜಯ ಸರ್ಜಿ 6,714, ಕಾಂಗ್ರೆಸ್‍ನ ಆಯನೂರು ಮಂಜುನಾಥ್ 2,434, ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್ 3,128, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ 576 ಮತಗಳನ್ನು ಪಡೆದರು. 2ನೇ ಸುತ್ತಿನಲ್ಲಿ ಧನಂಜಯ ಸರ್ಜಿ 7,363, ಆಯನೂರು ಮಂಜುನಾಥ್ 2,816, ರಘುಪತಿ ಭಟ್ 1963, ಎಸ್.ಪಿ. ದಿನೇಶ್ 709 ಮತಗಳನ್ನು, 3ನೇ ಸುತ್ತಿನಲ್ಲಿ ಧನಂಜಯ ಸರ್ಜಿ 8,578, ಆಯನೂರು ಮಂಜುನಾಥ್ 2,988, ರಘುಪತಿ ಭಟ್ 742, ಎಸ್.ಪಿ.ದಿನೇಶ್ 472 ಮತಗಳನ್ನು, 4 ಹಾಗೂ ಕೊನೆಯ ಸುತ್ತಿನಲ್ಲಿ ಧನಂಜಯ ಸರ್ಜಿ 8,544, ಆಯನೂರು ಮಂಜುನಾಥ್ 2,988, ರಘುಪತಿ ಭಟ್ 731, ಎಸ್.ಪಿ. ದಿನೇಶ್ 446 ಮತಗಳನ್ನು ಪಡೆದರು.
ಮಂಜುನಾಥ್‍ಗೆ ಮುಖಭಂಗ:
ಕಳೆದ ಬಾರಿ ಆಯನೂರು ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಸತತ 5 ಬಾರಿ ಗೆಲುವು ಸಾಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಟಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದರು. ಆದರೆ, ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಎದುರು ಭಾರಿ ಅಂತರದ ಸೋಲಿನೊಂದಿಗೆ ಮಂಜುನಾಥ್ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಈ ಬಾರಿ ಟಿಕೆಟ್ ವಂಚಿತರಾದ ಎಸ್.ಪಿ.ದಿನೇಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 2,518 ಮತಗಳನ್ನು ಪಡೆದು ಮುಖಭಂಗಕ್ಕೆ ಒಳಗಾದರು.