ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ರಸ್ತೆ ತಡೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 08- ಗುಂಡ್ಲುಪೇಟೆ-ಚಾಮರಾಜನಗರ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ಹೊರ ವಲಯದ ಮೂಡ್ಲುಪುರ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ನಗರದ ಮೂಡ್ಲುಪುರ ಬಳಿಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಚಾಮರಾಜನಗರ ಗುಂಡ್ಲುಪೇಟೆ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯ ಮೂಲಕ ಸಿಮ್ಸ್ ಅಸ್ಪತ್ರೆಯ ರೋಗಿಗಳು ಗಾರ್ಮೆಂಟ್ಸ್‍ನ ಮಹಿಳೆಯರು ಹಾಗೂ ಶಾಲಾ, ಕಾಲೇಜುಗಳಿಗೆ ಮಕ್ಕಳು ತೆರಳುತ್ತಾರೆ. ಮೂಡ್ಲುಪುರ ಬಳಿ ಗುಂಡಿ ಬಿದ್ದು 3 ವರ್ಷಗಳೇ ಕಳೆದು ಹೋಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗುಂಡಿ ಮುಚ್ಚಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿಲ್ಲ. ರಸ್ತೆಯ ದುಸ್ಥಿತಿ ಕಂಡರೂ ಕೂಡ ಪೆÇಲೀಸರು ಇಲಾಖೆಯ ಅಧಿಕಾರಿಗಳೂ ಇವರ ಮೇಲೆ ಸುಮೋಟೊ ಪ್ರಕರಣ ದಾಖಲಿಸದೇ ಮೌನ ವಹಿಸಿರುವುದು ದುರಂತವೇ ಸರಿ. ರಸ್ತೆಯಲ್ಲಿ ಓಡಾಡುವವರು ಬಿದ್ದು ಪ್ರಾಣ ಕಳೆದುಕೊಂಡರೆ ಯಾರು ಜವಬ್ದಾರಿಯಾಗುತ್ತಾರೆ.
ರಾಷ್ಟ್ರಪತಿ ಸೇರಿದಂತೆ ಮುಖ್ಯಮಂತ್ರಿಗಳು, ಸಚಿವರು ಬಂದರೆ ರಸ್ತೆ ರಿಪೇರಿ ಮಾಡಿಸಲು ಮುಂದಾಗುವ ಇಲಾಖೆಯ ಅಧಿಕಾರಿಗಳು ಅಪಘಾತಗಳು ಸಂಭವಿಸುವ ಸ್ಥಿತಿಯಲ್ಲಿದ್ದರೂ ರಸ್ತೆ ದುರಸ್ತಿಗೆ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ರಸ್ತೆಯಲ್ಲಿ ಉಂಟಾಗಿರುವ ಗುಂಡಿ ಮುಚ್ಚಿಸಿ ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಅನಿರ್ಧಿμÁ್ಟವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಿಡಬ್ಲ್ಯೂಡಿ ಇಂಜಿನಿಯಗೆ ತರಾಟೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಎಇಇ ರಮೇಶ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಇಲ್ಲಿಯ ತನಕ ಎಲ್ಲಿಗೆ ಹೋಗಿದ್ರಿ. ರಸ್ತೆ ದುರಸ್ತಿಗೆ ಯಾಕೆ ಮಾಡಿಸಿಲ್ಲ. ನಾವು ಕೂಡ ನಿಮಗೆ ಲಂಚ ಕೊಡಬೇಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಇಇ ರಮೇಶ್, ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಟೆಂಡರ್ ಅಪ್ರೋವಲ್ ಆಗಿಲ್ಲ. ಇಂದಿನಿಂದಲೇ ಕೆಲಸ ಪ್ರಾರಂಭಿಸಲಾಗುವುದು ಎಂದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಇಇ ಅವರನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದರು. ಇಇ ಅವರು ಬೆಂಗಳೂರಿಗೆ ಹೋಗಿದ್ದು ಇಂದಿನಿಂದಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ಜೆಸಿಬಿ ಮೂಲಕ ರಸ್ತೆ ದುರಸ್ತಿ ಆರಂಭಿಸಲಾಯಿತು.
ಪ್ರಯಾಣಿಕರ ಪರದಾಟ : ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ
ನಡೆಸಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಕಡೆಯಿಂದ ಬಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೈಕ್ ಸವಾರರು ಬೇರೆ ದಾರಿಗಳಲ್ಲಿ ಸಂಚರಿಸಿದರು. ತಮ್ಮ ಕೆಲಸಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಧರಣಿಯಿಂದಾಗಿ ಪರದಾಡಿದರು. ಸಿಮ್ಸ್ ಆಸ್ಪತ್ರೆಗೆ ತೆರಳುತ್ತಿದ್ದ ಆಂಬುಲೆನ್ಸ್ ಹಾಗೂ ವಾಹನಗಳನ್ನು ತೆರಳಲು ಅವಕಾಶ ಕಲ್ಪಿಸಿಕೊಡಲಾಯಿತು. ಸ್ಥಳದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಮೈಸೂರು ಜಿಲ್ಲಾಧ್ಯಕ್ಷ ಪಾಡ್ಯ ರವಿ, ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳೀಕಟ್ಟೆ ಕುಮಾರ್, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ. ಪದಾಧಿಕಾರಿಗಳಾದ ಪ್ರಭುಸ್ವಾಮಿ, ಚೇರ್ಮನ್ ಗುರು, ಗುರುಮಲ್ಲಪ್ಪ, ಮೋಹನ್, ಚಂದ್ರು, ಸತೀಶ, ಶ್ರೀಕಂಠ ಮೊದಲಾದವರು ಇದ್ದರು.