ನಿವೃತ್ತ ಸರ್ಕಾರಿ ಅಭಿಯೋಜಕ ರಾಜಣ್ಣಗೆ ಆತ್ಮೀಯ ಬೀಳ್ಕೊಡುಗೆ
ತುಮಕೂರು, ಜೂ. ೮- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಹಿರಿಯ ಸರ್ಕಾರಿ ಅಭಿಯೋಜಕ ಎಸ್.ರಾಜಣ್ಣ ಅವರಿಗೆ ಜಿಲ್ಲಾ ನ್ಯಾಯಾಂಗದ ವತಿಯಿಂದ ಆತ್ಮೀಯವಾಗಿ ಬೀಳ್ಕೋಡಲಾಯಿತು.
ನಿವೃತ್ತ ಸರ್ಕಾರಿ ಅಭಿಯೋಜಕ ಎಸ್.ರಾಜಣ್ಣ ಅವರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್, ಸರ್ಕಾರಿ ಸೇವೆಗೆ ಸೇರಿ ಯಾವುದೇ ಹಗರಣಗಳಿಗೆ ಸಿಲುಕದೆ ಕಪ್ಪುಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುವುದು ಇತ್ತೀಚಿನ ದಿನಗಳಲ್ಲಿ ಬಹು ಕಷ್ಟಕರವಾದ ಸಂಗತಿ. ಅದರಲ್ಲಿಯೂ ನ್ಯಾಯಾಂಗದ ಜತೆಗೆ ಕರ್ತವ್ಯ ನಿರ್ವಹಿಸುವುದು ಇನ್ನೂ ಕಠಿಣವಾದ ಕೆಲಸ. ಅಂತಹವುದರಲ್ಲಿ ಎಸ್.ರಾಜಣ್ಣನವರು, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ, ನೊಂದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸರ್ಕಾರಿ ಅಭಿಯೋಜಕರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಸೌಮ್ಯ ಮತ್ತು ಮೃದು ಸ್ವಭಾವದಿಂದಲೇ ಗುರುತಿಸಿಕೊಂಡು, ನ್ಯಾಯಾಲಯದಲ್ಲಿ ಕಠಿಣ ಪರಿಶ್ರಮ ವಹಿಸಿ, ಕಾನೂನಿನ ರೀತಿಯಲ್ಲಿ ಸಮರ್ಥವಾಗಿ ಪ್ರಕರಣಗಳನ್ನು ನಡೆಸುವಲ್ಲಿ ಮತ್ತು ತಪಿತಸ್ಥರಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಇಂತಹವರ ಸೇವೆಯನ್ನು ಗುರುತಿಸುವುದು ಮತ್ತು ಗೌರವಿಸುವುದು ಅವರ ಸೇವೆಗೆ ಸಲ್ಲಿಸುವ ಗೌರವಯುತ ವಿದಾಯ. ಇದು ಅವರ ನೆನಪಿನಲ್ಲಿ ಉಳಿಯುವಂತಾಗಬೇಕು ಎಂದರು.
ಲೋಕಾಯುಕ್ತ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಮಾತನಾಡಿ, ರಾಜಣ್ಣ ನವರು ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದನ್ನು ಹತ್ತಿರದಿಂದ ಗಮನಿಸಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾರಾವ್ ಮಾತನಾಡಿ, ರಾಜಣ್ಣ ನವರು ವೃತ್ತಿಯ ಜತೆಗೆ ನಾಟಕ ಕಲೆಯನ್ನು ಮೈಗೂಡಿಸಿಕೊಂಡು ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕಲಾವಿದರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಶ್ರೀ ಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗದವರು ಏರ್ಪಡಿಸಿದ್ದ ಕುರುಕ್ಷೇತ್ರ ನಾಟಕದ ಪ್ರದರ್ಶನದ ಸಂದರ್ಭದಲ್ಲಿ ಬೆಳ್ಳಿ ಕಿರೀಟ ನೀಡಿ ಗೌರವಿಸಿರುವುದು ಅವರ ಕಲಾ ಸೇವೆಗೆ ಉತ್ತಮ ನಿದರ್ಶನ. ತುಮಕೂರಿನ ಶ್ರೀಕೃಷ್ಣನ ಪಾತ್ರ ಇವರಿಗೆ ಹೇಳಿ ಮಾಡಿಸಿದಂತಿದೆ. ಇವರ ಕಲಾ ಸೇವೆಗೆ ಹೆಚ್ಚಿನ ಯಶಸ್ಸು ಸಿಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಲ್ಲಾ ನ್ಯಾಯಾಧೀಶರು, ಹಿರಿಯ, ಕಿರಿಯ ಶ್ರೇಣಿ ನ್ಯಾಯಾಧೀಶರುಗಳು, ಅಭಿಯೋಜನಾ ಇಲಾಖೆಯ ಹಿರಿಯ, ಕಿರಿಯ ಅಭಿಯೋಜಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.