ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಲು ರೈತರಿಗೆ ಸಲಹೆ
ಹುಳಿಯಾರು, ಜೂ. ೮- ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ೨೦೨೪ ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ತಾಲ್ಲೂಕಿನ ರೈತರು ಬೆಳೆ ವಿಮೆ ಮಾಡಿಸಿ ಇದರ ಸದುಪಯೋಗಪಡಿಸಿಕೊಳ್ಳುವಂತೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಶಿವರಾಜ್‌ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತೊಗರಿ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ) ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾಗಿವೆ. ಅಲಸಂದೆ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಸಾಮೆ(ಮಳೆ ಆಶ್ರಿತ), ಹೋಬಳಿ ಮಟ್ಟದ ಬೆಳೆಗಳೆಂದು ಅಧಿಸೂಚಿಸಲಾಗಿದ್ದು ನಿಗಧಿಯಾಗಿರುವ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿದೆ.
ಮಳೆಯಾಶ್ರಿತ ಹೆಸರು ಬೆಳೆಗೆ ವಿಮೆ ಕಂತು ತುಂಬಲು ಜುಲೈ ೧ ಕೊನೆಯ ದಿನಾಂಕವಾಗಿದ್ದು, ಪ್ರತಿ ಎಕರೆಗೆ ರೈತರು ೨೬೯.೧೩ ರೂ. ವಿಮಾ ಕಂತು ಕಟ್ಟಬೇಕಿದೆ. ಮಳೆಯಾಶ್ರಿತ ಹುರುಳಿ, ರಾಗಿ, ಸಾಮೆ ವಿಮೆ ಕಂತು ತುಂಬಲು ಆಕ್ಟೋಬರ್ ೧೬ ಕೊನೆಯ ದಿನವಾಗಿದೆ. ಪ್ರತಿ ಎಕರೆಗೆ ರೈತರು ಹುರುಳಿಗೆ ೧೬೫.೯೩ ರೂ., ರಾಗಿಗೆ ೩೪೪ ರೂ., ಸಾಮೆಗೆ ೨೨೮.೬೬ ರೂ. ವಿಮಾ ಕಂತು ಕಟ್ಟಬೇಕು. ಮಳೆಯಾಶ್ರಿತ ತೊಗರಿಗೆ ಜುಲೈ ೧೫ ಕೊನೆ ದಿನವಾಗಿದ್ದು ಎಕರೆಗೆ ೩೮೮.೫೧ ರೂ. ವಿಮಾ ಕಂತು ಕಟ್ಟಬೇಕು ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ.೭೫ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ.೨೫ ರಷ್ಟು ಬೆಳೆ ವಿಮೆ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ನೀಡುವುದು. ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ. ನೆರೆ, ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲದಿಂದ ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು, ನಿರೀಕ್ಷಿತ ಇಳುವರಿಯು ಪ್ರಾರಂಭಿಕ ಇಳುವರಿಯ ಶೇ.೫೦ ಕ್ಕಿಂತ ಕಡಿಮೆ ಇದ್ದರೆ, ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.೨೫ ರಷ್ಟು ಹಣವನ್ನು ಮುಂಚಿತವಾಗಿ ವಿಮಾ ಸಂಸ್ಥೆನೀಡುತ್ತದೆ.
ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿಯೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಕೈಗೊಳ್ಳುವ ಎರಡು ವಾರಗಳೊಳಗಾಗಿ (೧೪ ದಿನಗಳು) ಚಂಡಮಾರುತ. ಚಂಡಮಾರುತ ಸಹಿತ ಮಳೆ ಮತ್ತು ಆಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯುಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲ ಜಿಲ್ಲೆಗಳನ್ನು ಒಳಪಡಿಸಲಾಗಿದೆ.
ರೈತರು ಈ ಬಗ್ಗೆ ಸಂಬಂಧಪಟ್ಟ ಆರ್ಥಿಕ ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ನೇರವಾಗಿ ಅಥವಾ ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಬೆಳೆ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು ೭೨ ಗಂಟೆಗಳೊಳಗಾಗಿ ತಿಳಿಸಬೇಕು. ಬೆಳೆ ಕಟಾವು ಪ್ರಯೋಗಗಳ ಣhಡಿeshoಟಜ ಇಳುವರಿಗಿಂತ ಬೆಳೆಯ ಇಳುವರಿಯು ಕಡಿಮೆ ಬಂದಂತಹ ಸಂದರ್ಭದಲ್ಲಿ ವಿಮಾ ಮೊತ್ತ ಪಾವತಿಸಲಾಗುವುದು. ರೈತರು ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್‌ಗಳಲ್ಲಿ ವಿಮಾ ನೋಂದಣಿ ಮಾಡಿಕೊಂಡು ವಿಮೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.