ಶಾಂತಿಯುತ ತಾಲ್ಲೂಕು: ಮಧುಗಿರಿ ಪ್ರಥಮ – ಎಸ್ಪಿ ಮೆಚ್ಚುಗೆ
ಮಧುಗಿರಿ, ಜೂ. ೮- ಜಿಲ್ಲೆಯಲ್ಲಿ ಅತಿ ಶಾಂತಿಯುತವಾದ ತಾಲ್ಲೂಕಾಗಿ ಮಧುಗಿರಿ ಪ್ರಥಮ ಸ್ಥಾನ ಪಡೆದಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಪೊಲೀಸ್, ಮಧುಗಿರಿ ಉಪವಿಭಾಗ ಮತ್ತು ಮಧುಗಿರಿ ಪೊಲೀಸ್ ಠಾಣೆ ವತಿಯಿಂದ ನಡೆದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಗಡಿ ಭಾಗಗಳಲ್ಲಿ ಸಿಮಾಂಧ್ರದವರ ಮೇಲೆ ಪ್ರಕರಣಗಳು ದಾಖಲಾಗಿದ್ದು ಬಿಟ್ಟರೆ ಸ್ಥಳೀಯವಾಗಿ ಸಾರ್ವಜನಿಕರು ಶಾಂತಿಯುತವಾಗಿ ಚುನಾವಣೆ ನಡೆಸಿದ್ದಕ್ಕೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದು ನಮ್ಮ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲಾಗುವುದು. ಜತೆಗೆ ಪ್ರಮುಖ ರಸ್ತೆಗಳಲ್ಲಿ, ಸಂತೆ ನಡೆಯುವ ಸ್ಥಳಗಳಲ್ಲಿ ಕೆಲ ಅಪರಿಚಿತ ಕಳ್ಳರು, ಮಾಟ ಮಂತ್ರ ಮಾಡುವುದರ ಮೂಲಕ ಅಪರಾಧ ಕೃತ್ಯಗಳಲ್ಲಿ ತೊಡುಗುತ್ತಿದ್ದು ಇಂತಹ ಕೃತ್ಯಗಳ ನಿಯಂತ್ರಣಕ್ಕಾಗಿ ಸಿಸಿ ಕ್ಯಾಮರಾ ಆಳವಡಿಸಲಾಗುವುದು. ಶಾಲಾ ವಲಯ ಹಾಗೂ ಧಾರ್ಮಿಕ ಕ್ಷೇತ್ರಗಳ ಸಮೀಪ ಮದ್ಯ ಮಾರಾಟವಾಗದಂತೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ವಾಹನ ಸವಾರರು ರಸ್ತೆಗಳಲ್ಲಿ ನಿಧನವಾಗಿ ಚಲಿಸಬೇಕು. ಇದರಿಂದ ಪ್ರಾಣಾಪಾಯಗಳು ಕಡಿಮೆಯಾಗುತ್ತವೆ ಹಾಗೂ ಅವೈಜ್ಞಾನಿಕವಾಗಿ ಹಾಕಲಾಗಿರುವ ರಸ್ತೆಗಳ ಉಬ್ಬುಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ಅಪ್ರಾಪ್ತ ಬಾಲಕಿಯರಿಗೆ ಪೋಷಕರೆ ವಿವಾಹಗಳನ್ನು ಮಾಡುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಗರ್ಭ ಧರಿಸಿರುವ ಅಪ್ರಾಪ್ತ ಬಾಲಕಿಯರು ಆಸ್ಪತ್ರೆಗೆ ಬರುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಪೋಷಕರಾಗಲಿ ಅಥವಾ ವಿವಾಹಿತ ಪುರುಷರ ವಿರುದ್ಧ ಯಾವುದೇ ಮುಲಾಜಿಲ್ಲದೆ ಪೋಕ್ಸೋ ಪ್ರಕರಣ ದಾಖಲಿಸುವ ಜತೆಗೆ ಶಾಲಾ-ಕಾಲೇಜುಗಳಲ್ಲಿ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಬಸ್ ನಿಲ್ದಾಣಗಳಲ್ಲಿ ಮಳೆ ಬಂದಾಗ ಸಾರ್ವಜನಿಕರ ನಿಲುಗಡೆಯಾಗಲು ಕಷ್ಟಕರವಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಡ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪತ್ರಕರ್ತ ಜಿ.ನಾರಾಯಣರಾಜು ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಹಾಸ್ಟೆಲ್ ಮುಂಭಾಗವಿರುವ ಪಾರ್ಕಿಂಗ್ ವ್ಯವಸ್ಥೆ ತೆರವುಗೊಳಿಸಬೇಕು. ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ವಾಹನ ಕಲಿಕೆಯನ್ನು ನಿಷೇಧಿಸಬೇಕು. ಶಾಲಾ-ಕಾಲೇಜುಗಳು ಬಿಟ್ಟಾಗ ಹಾಗೂ ಆರಂಭದ ಸಮಯದಲ್ಲಿ ವೆಂಕಟರವಣಸ್ವಾಮಿ ಮತ್ತು ಮಲ್ಲೇಶ್ವರಸ್ವಾಮಿ ದೇವಾಲಯಗಳು ಪ್ರೇಮಿಗಳ ತಾಣವಾಗುತ್ತಿವೆ. ಅಂಬೇಡ್ಕರ್ ಪುತ್ಥಳಿಯ ಸಮೀಪ ಆಳವಡಿಸಿರುವ ಸಿಸಿ ಕ್ಯಾಮರಾ ಕಳೆದ ಎಂಟು ವರ್ಷಗಳಿಂದ ಹಾಳಾಗಿದ್ದು ಅಹಿತಕರ ಘಟನೆ ನಡೆಯುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದರು.
ದೊಡ್ಡೇರಿ ಕಣೀಮಯ್ಯ, ವೆಂಕಟಾಪುರ ಗೋವಿಂದರಾಜು, ಬ್ಯಾಲ್ಯ ನಾಗರಾಜು, ಡೈರಿ ತಿಮ್ಮಣ್ಣ, ಪ್ರಸನ್ನಕುಮಾರ್, ಎಸ್‌ಬಿಟಿ ರಾಮು, ಲಾಲಾಪೇಟೆ ಮಂಜುನಾಥ್, ಸೋದೇನಹಳ್ಳಿ ಗೋವಿಂದರಾಜು, ನಿವೃತ್ತ ಶಿಕ್ಷಕ ವೆಂಕಟರವಣಪ್ಪ, ಎಸ್.ಕೆ. ರಂಗನಾಥ್, ಗಂಗಾಧರ್ ಮತ್ತಿತರರು ಮಾತನಾಡಿದರು.
ಸಭೆಯಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ, ಸಿಪಿಐಗಳಾದ ರವಿಕುಮಾರ್, ಕಾಂತರೆಡ್ಡಿ, ಪಿಎಸ್‌ಐಗಳಾದ ಮಹಮದ್ ಪೈಗಂಬರ್ ಅಮ್ಮಣ್ಣಗಿ, ಮುತ್ತುರಾಜು, ಶ್ರೀನಿವಾಸ್, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.