ಅರಣ್ಯದಲ್ಲಿ ಬೀಜ ಉಂಡೆ ಬಿತ್ತಿದ ವಿದ್ಯಾರ್ಥಿಗಳು
ತಿಪಟೂರು, ಜೂ. ೮- ನಗರದ ದೀಕ್ಷಾ ಹೆರಿಟೇಜ್ ಶಾಲೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಚೌಡ್ಲಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಶ್ರೀಗಂಧ, ಕಾಮ್ರ ಹಾಗೂ ಇತರ ಅರಣ್ಯ ಮರಗಳ ಮಣ್ಣಿನ ಬೀಜದ ಉಂಡೆಗಳನ್ನು ಶಾಲಾ ವಿದ್ಯಾರ್ಥಿಗಳು ಅರಣ್ಯ ಪ್ರದೇಶದಲ್ಲಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಮಧು, ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಸಂಬಂಧಿಸಿದ ವಿಷಯಗಳನ್ನು ಕಲಿಯುವ ಜತೆಗೆ ಪರಿಸರ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದಂತೆ ವಿಚಾರಗಳನ್ನು ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದಾಗ ಹೊಸ ಅನುಭವ ದೊರೆಯುತ್ತದೆ ಎಂದರು.
ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಇರುವುದನ್ನು ಪ್ರಕೃತಿಯ ಮಧ್ಯ ಜೀವಿಸಬೇಕು. ಪ್ರಾಕೃತಿಕ ಹಾಗೂ ಪರಿಸರದ ಜೀವ ವೈವಿಧ್ಯತೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಹನುಮರಂಗಯ್ಯ ಬೀಜದ ಉಂಡೆಗಳ ಬಗ್ಗೆ ಮಾಹಿತಿ ನೀಡಿ, ಪರಿಸರವನ್ನು ನಾವು ಇಂದು ರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಸಹ ಉತ್ತಮ ಪರಿಸರವನ್ನು ಕೊಡಬಹುದು. ಪ್ರತಿಯೊಬ್ಬರು ಸಹ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಜವಾಬ್ದಾರಿ ಹಾಗೂ ಕರ್ತವ್ಯವಾಗಿದ್ದು, ಭೂಮಿಯ ಮೇಲೆ ಗಿಡಗಳನ್ನು ನೆಟ್ಟು ಪೋಷಿಸುವುದನ್ನು ಕಲಿಯಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನವೀನ್, ಶಾಲೆಯ ಪ್ರಾಂಶುಪಾಲರಾದ ಆರ್.ಎಸ್ ಗೀತಾ ಸೇರಿದಂತೆ ಶಿಕ್ಷಕರು, ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.