ವಿಶ್ವ ಪರಿಸರ ದಿನಾಚರಣೆ
ಕೋಲಾರ,ಜೂ.೮- ನೀರನ್ನು ಸಂರಕ್ಷಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಎಸ್.ಎಂ.ಸೆಹಗಲ್ ಪೌಂಡೇಶನ್ ಕಳೆದ ೩ ವರ್ಷಗಳಿಂದ ಕೋಲಾರ ಜಿಲ್ಲೆಯ ಹಲವೆಡೆ ಅನೇಕ ಕೆರೆಗಳನ್ನು ಅಭಿವೃದ್ಧಿಗೊಳಿಸಿದೆ.
ಈ ಒಂದು ನಿಟ್ಟಿನಲ್ಲಿ ಗ್ರಾಮೀಣ ಪರಿವರ್ತನೆ ಹಾಗೂ ಜಲಾನಯನ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂತೇಹಳ್ಳಿ ಗ್ರಾಮದ ಕೆರೆಯನ್ನು ಅಭಿವೃದ್ದಿಗೊಳಿಸುತ್ತಿದೆ.
ವಿಶ್ವ ಪರಿಸರ ದಿನದ ಅಂಗವಾಗಿ ಗ್ರಾಮದ ಸರ್ಕಾರಿ ಜಾಗಗಳಲ್ಲಿ, ಶಾಲಾ ಮಕ್ಕಳು, ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸೆಹಗಲ್ ಸಂಸ್ಥೆಯು ಸುಮಾರು ೧೦೦ ವಿವಿಧ ಗಿಡಗಳನ್ನು ನೆಟ್ಟರು.
ಮಕ್ಕಳಲ್ಲಿ, ಪರಿಸರ ಮಾಲಿನ್ಯ ಹಾಗೂ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ರಕ್ಷಣೆ ಕುರಿತು ವಿವಿಧ ಪಲಕಗಳನ್ನು ರಚಿಸಿ, ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಹಲವೆಡೆ ಜಾಥಾ ಹೊರಡಲಾಯಿತು.
ಈ ಸಂದರ್ಭದಲ್ಲಿ ಪಿ.ಡಿ.ಓ ರವೀಂದ್ರ ಮಾತನಾಡಿ, ಪರಿಸರ ರಕ್ಷಣೆ ನಮ್ಮನಿಮ್ಮೆಲ್ಲರ ಕರ್ತವ್ಯ ಆದುದರಿಂದ ಹೆಚ್ಚು ಮರಗಿಡಗಳನ್ನು ಬೆಳಸೋಣ ಎಂದು ತಿಳಿಸಿದರು.
ಸೆಹಗಲ್ ಸಂಸ್ಥೆಯ ಪ್ರೋಗ್ರಾಮ್ ಲೀಡ್ ಶಿವಶರಣಪ್ಪ ಮರ-ಗಿಡಗಳನ್ನು ಕಡಿಯದೆ ಇನ್ನು ಹೆಚ್ಚು ಬೆಳೆಸೋಣ ಇದರಿಂದ ಮುಂದಿನ ಪೀಳಗೆಗೆ ಆರೋಗ್ಯವಂತ ವಾತಾವರಣವನ್ನು ನಿರ್ಮಿಸಿಕೊಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕರು, ಸದಸ್ಯರು, ಸೆಹಗಲ್ ಪೌಂಡೇಶನ್ ಸಂಸ್ಥೆಯ ಸಿಬ್ಬಂದಿಗಳು, ಪದೇ ಒಬಟ್ಟಿ ಪ್ರಸಾದ್, ಶಾಲಾ ಮಕ್ಕಳು, ಹಾಗೂ ಗ್ರಾಮಸ್ಥರು ಹಾಜರಿದ್ದರು.