ಸುರಕ್ಷಿತ ಆಹಾರ ಸೇವನೆಯಿಂದ ಸದೃಢ ಆರೋಗ್ಯ
ಕಲಬುರಗಿ:ಜೂ.7: ಮಾನವನು ಆರೋಗ್ಯಪೂರ್ಣವಾಗಿ ಜೀವಿಸಲು ಶುದ್ದವಾದ ಆಕ್ಷಿಜನ್, ಕುಡಿಯುವ ನೀರು ಮತ್ತು ಆಹಾರ ಅವಶ್ಯಕವಾಗಿವೆ. ನಮ್ಮ ದೇಹಕ್ಕೆ ಬರುವ ಅನೇಕ ಕಾಯಿಲೆಗಳು ಇವುಗಳಿಗೆ ಸಂಬಂಧಿಸಿವೆ. ಶುಚಿಯಾದ, ಸತ್ವಯುತ ಮತ್ತು ಸಮತೋಲಿತವಾದ ಆಹಾರದ ಸೇವನೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ವಿಶ್ವ ಆಹಾರ ಸುರಕ್ಷತೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾನವನ ದುರಾಸೆಯಿಂದ ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆ, ರಾಸಾಯನಿಕಗಳು, ಕೃತಕ ಬಣ್ಣಗಳು, ವಿಷಪೂರಿತ ಪದಾರ್ಥಗಳನ್ನು ಬೆರೆಸುತ್ತಿರುವುದು ಅಮಾನವೀಯ ಹಾಗೂ ಅಪರಾದದ ಕೃತ್ಯವಾಗಿದೆ. ಇಂತಹ ಆಹಾರವನ್ನು ಸೇವಿಸುವದರಿಂದ ಸಹಜವಾಗಿಯೇ ಆರೋಗ್ಯ ಹಾಳಾಗುತ್ತದೆ. ಆಹಾರದ ಸುರಕ್ಷತೆಗೆ ಸಂಬಂಧಿಸಿದಂತೆ ಅಂಗಡಿ, ಬೇಕರಿ, ಉಪಹಾರ ಗೃಹ, ತಳ್ಳುಗಾಡಿ ಸೇರಿದಂತೆ ಎಲ್ಲರು ಕಾಳಜಿ ವಹಿಸಬೇಕಾದದ್ದು ತುಂಬಾ ಅಗತ್ಯವಾಗಿದೆ. ಕಲೆಬೆರಕೆಯಿಂದ ಕೂಡಿದ, ಎಗ್‍ಮಾರ್ಕ್ ಇರದ, ಪರೀಕ್ಷೆಗೆ ಒಳಪಡದ ವಸ್ತುಗಳಿಂದ ಗ್ರಾಹಕರು ಎಚ್ಚರ ವಹಿಸಬೇಕು. ಸಮತೋಲನೆಯುತ, ಎಲ್ಲಾ ಪೋಷಕಾಂಶಗಳುಳ್ಳ, ಕಲಬೆರಕೆ ರಹಿತ, ಸುರಕ್ಷಿತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕರಾದ ಪೂರ್ಣಿಮಾ ಪಾಟೀಲ, ಪ್ರಿಯಾಂಕಾ ಪಿ.ಕೆ, ಶಿಲ್ಪಾ ಎಸ್.ಕೆ, ರೋಹಿತ್, ವರ್ಷಿಣಿ, ಪ್ರೀತಿ ಜೆ.ಬಿ, ಕಾಶಮ್ಮ ಎಸ್.ಚಿನಮ್ಮಳ್ಳಿ, ಸೇವಕಿ ಸುನಿತಾ ಹಾಗೂ ವಿದ್ಯಾರ್ಥಿಗಳು ಇದ್ದರು.