ಮಾಲಿನ್ಯ ಮುಕ್ತ ಸಮಾಜಕ್ಕೆ ಎಲ್ಲರೂ ಕೈಜೋಡಿಸಿ
ಕೋಲಾರ,ಜೂ,೭- ಪ್ಲಾಸ್ಟಿಕ್ ಬಳಕೆ ಮುಕ್ತ ಮಾಡುವುದರ ಜತೆಗೆ ಮಾಲಿನ್ಯ ಮುಕ್ತ ಸಮಾಜಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ಕರೆ ನೀಡಿದರು.
ನಗರದ ನ್ಯಾಯಾಲಯದ ಆವರಣದಲ್ಲಿನ ಉದ್ಯಾನವನದಲ್ಲಿ ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಅರಣ್ಯ ಇಲಾಖೆ ಆಶ್ರಯದಲ್ಲಿ ೫೦ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವಪರಿಸರ ದಿನಾಚರಣೆ ಪ್ರತಿ ವರ್ಷ ಆಚರಿಸಿದರೆ ಸಾಲದು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು, ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂಪ್ರೇರಿತರಾಗಿ ನಿಲ್ಲಿಸಿ ಪರಿಸರ ಕಾಳಜಿ ತೋರಬೇಕು ಎಂದರು.
ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗಿ ಅದು ಭೂಮಿಯಲ್ಲಿ ಕೊಳೆಯದ ಕಾರಣ ಭೂಮಿ ಮಾಲಿನ್ಯವಾಗುತ್ತಿದೆ, ಅದನ್ನು ತಿಂದ ದನಕರು,ಪ್ರಾಣಿಗಳಿಗೂ ಮಾರಕವಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಮನೆಯಿಂದ ಹೊರ ಹೋಗುವಾಗ ಬಟ್ಟೆಯ ಕೈಚೀಲ ಬಳಸುವ ಮೂಲಕ ಪ್ಲಾಸ್ಟಿಕ್‌ಅನ್ನು ಸಾಧ್ಯವಾದಷ್ಟು ಬಳಸದಿರಲು ಪ್ರತಿಜ್ಞೆ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.
ಕಸ ವಿಲೇವಾರಿ ಸಂದರ್ಭದಲ್ಲಿ ಹಸಿ,ಒಣಕಸ ಪ್ರತ್ಯೇಕಿಸುವ ಮೂಲಕ ನಿಮ್ಮ ಮನೆ ಬಳಿಗೆ ಬರುವ ಪೌರ, ಗ್ರಾ.ಪಂ ಕಾರ್ಮಿಕರಿಗೆ ಸಹಕಾರ ನೀಡಿ, ಮುಂದಿನ ದೇಶದ ಭವಿಷ್ಯವಾಗಿರುವ ಮಕ್ಕಳಲ್ಲಿ ಈ ಪರಿಸರ ಜಾಗೃತಿ ಬಂದರೆ ಅದು ಹೆಮ್ಮರವಾಗಿ ಬೆಳೆದು ಪರಿಸರಮಾಲಿನ್ಯ ಮುಕ್ತ ನವಸಮಾನ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರೂ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಹೊಸಮನಿ ಮಾತನಾಡಿ, ಮನುಷ್ಯನ ಅತಿಯಾದ ಆಸೆಯಿಂದ ಅರಣ್ಯ ನಾಶದ ಜತೆಗೆ ಪ್ಲಾಸ್ಟಿಕ್ ಬಳಕೆ ಭೂಮಿಯನ್ನು ಕಲುಷಿತಗೊಳಿಸುತ್ತಿದೆ, ಮುಂದಿನ ಪೀಳಿಗೆ ಬದುಕಿಗೆ ಇದು ಹಾನಿಕಾರಕವಾಗಿದ್ದು, ಅರಣ್ಯ ಉಳಿಸೋಣ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸೋಣ ಎಂದು ಕಿವಿಮಾತು ಹೇಳಿದರು.
ಗಿಡಮರ ಬೆಳೆಸುವ ಸಂಕಲ್ಪ ಪ್ರತಿಯೊಬ್ಬರದಾಗಲಿ ಎಂದ ಅವರು, ಪ್ರಕೃತಿಯ ಜತೆ ನಾವು ಹೊಂದಿಕೊಂಡು ಹೋಗಬೇಕೆ ಹೊರತೂ ಅದರ ವಿರುದ್ದ ಹೋದರೆ ಅದರಿಂದಾಗುವ ಹಾನಿಯನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಕೆ.ದಿವ್ಯಾ, ನ್ಯಾಯಾಧೀಶರಾದ ಕೆ.ಬಿ.ಪ್ರಸಾದ್, ಶಕುಂತಲಾ, ಆರ್.ನಟೇಶ್, ರೆಹಾನಾ ಸುಲ್ತಾನ, ಶ್ರೀನಿವಾಸಪಾಟೀಲ್,ಚೇತನಾ ಅರಿಕಟ್ಟಿ, ಪಿ.ಮದನ್,ಜೆ.ಹರ್ಷ, ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಬೈರಾರೆಡ್ಡಿ ಮತ್ತಿತರರಿದ್ದರು.