ಅರ್ಥಪೂರ್ಣ, ಸಮಾಜಮುಖಿ ಕಾರ್ಯಗಳು ಜರುಗಲಿ
ಕಲಬುರಗಿ:ಜೂ.7: ಯಾವ ವ್ಯಕ್ತಿ ತನ್ನ ಕುಟುಂಬದ ಏಳ್ಗೆಯ ಜೊತೆ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಾನೆಯೋ, ಅಂತಹ ವ್ಯಕ್ತಿ ನಿಜವಾಗಿಯೂ ದೊಡ್ಡ ವ್ಯಕಿತ್ವ ಹೊಂದಿರುತ್ತಾನೆ. ಸಮಾಜ ಸೇವಕರಿಗೆ ಪ್ರೋತ್ಸಾಹ ನೀಡಿದರೆ ಅವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಗಳಿಂದ ಆತ್ಮತೃಪ್ತಿ ಸಾಧ್ಯವಿದೆ ಎಂದು ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ಸಮಾಜ ಸೇವಕ ದಂಪತಿ ಜಯಶ್ರೀ ಎಚ್.ಪಾಟೀಲ ಮತ್ತು ಎಚ್.ಬಿ.ಪಾಟೀಲರ ಒಂಬತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಹಾಗೂ ಅವರ ಸುಪುತ್ರ ಬಸವಭುವನ ಮೂರನೇ ವರ್ಷದ ಜನ್ಮದಿನದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ರಾಮತೀರ್ಥ ಸಮೀಪದಲ್ಲಿರುವ ಕೊಳಗೇರಿ ಪ್ರದೇಶದ ಮಕ್ಕಳಿಗೆ ಶುಕ್ರವಾರ ಬಟ್ಟೆ ವಿತರಿಸಿ ಅವರು ಮಾತನಾಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ ಮಾತನಾಡಿ, ನಾವು ಮಾಡುವ ಯಾವುದೇ ಆಚರಣೆ ಆಡಂಬರ, ದುಂದು ವೆಚ್ಚದಿಂದ ಕೂಡಿದರೆ ಪ್ರಯೋಜನೆಯಿಲ್ಲ. ಬದಲಿಗೆ ಆಚರಣೆ ಸಮಾಜಮುಖಿಯಾಗಿರಬೇಕು. ಮದುವೆ ವಾರ್ಷಿಕೋತ್ಸವ ಮತ್ತು ಜನ್ಮದಿನದ ನಿಮಿತ್ಯ ಬಡ ಮಕ್ಕಳಿಗೆ ಬಟ್ಟೆಯನ್ನು ನೀಡುವ ಕಾರ್ಯ ಸಮಾಜಮುಖಿ, ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಸೇರಿದಂತೆ ಮತ್ತಿತರರಿದ್ದರು.