ಪುಸ್ತಕಗಳು, ಗಿಡಗಳನ್ನು ಕಾಣಿಕೆಯಾಗಿ ನೀಡುವ ಪದ್ದತಿ ಬೆಳೆಯಲಿ
ಕಲಬುರಗಿ:ಜೂ.7: ಇತ್ತೀಚಿಗೆ ಅನೇಕ ಸಭೆ-ಕಾರ್ಯಕ್ರಮಗಳಲ್ಲಿ ದುಂದು ವೆಚ್ಚ ಹೆಚ್ಚಾಗುತ್ತಿದೆ. ಬೇರೆ ವಸ್ತುಗಳನ್ನು ಕಾಣಿಗೆಯಾಗಿ ನೀಡುವ ಬದಲು ಗಿಡಗಳು, ಉತ್ತಮ ಗ್ರಂಥಗಳನ್ನು ನೀಡಬೇಕು. ಗಿಡಗಳಿಂದ ಪರಿಸರ ಉಳಿದರೆ, ಪುಸ್ತಕಗಳಿಂದ ವ್ಯಕ್ತಿ ಉಳಿಯುತ್ತಾನೆ ಎಂದು ಸಾಮಾಜಿಕ ಚಿಂತಕ ಡಾ.ಸುನೀಲಕುಮಾರ ಎಚ್.ವಂಟಿ ಮಾರ್ಮಿಕವಾಗಿ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯ ಆವರಣದಲ್ಲಿ ಸಮಾಜ ಸೇವಕ ದಂಪತಿ ಜಯಶ್ರೀ ಎಚ್.ಪಾಟೀಲ ಮತ್ತು ಎಚ್.ಬಿ.ಪಾಟೀಲರ ಒಂಬತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಹಾಗೂ ಅವರ ಸುಪುತ್ರ ಬಸವಭುವನ ಮೂರನೇ ವರ್ಷದ ಜನ್ಮದಿನದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ಪುಸ್ತಕಗಳು ಮತ್ತು ಗಿಡಗಳನ್ನು ವಿತರಿಸುವ ‘ಜ್ಞಾನ-ಹಸಿರು ಸಂಭ್ರಮ’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ಎಚ್.ಬಿ.ಪಾಟೀಲ ಅವರದು ಸಮಾಜಕ್ಕೆ ಮಾದರಿಯ ಬದುಕು. ದಿನನಿತ್ಯ ಒಂದು ಕಾರ್ಯಕ್ರಮ ಹಮ್ಮಿಕೊಂಡು ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುವ ಮೇರು, ಮಾದರಿ ವ್ಯಕ್ತಿತ್ವ. ಅವರ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಅವರಲ್ಲಿರುವ ಸಮಾಜಪರ ಕಾಳಜಿ ಮೆಚ್ಚುವಂತಹದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಗಣಮುಖಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕರಾದ ಪೂರ್ಣಿಮಾ ಪಾಟೀಲ, ಪ್ರಿಯಾಂಕಾ ಪಿ.ಕೆ, ಶಿಲ್ಪಾ ಎಸ್.ಕೆ, ರೋಹಿತ್, ವರ್ಷಿಣಿ, ಪ್ರೀತಿ ಜೆ.ಬಿ, ಕಾಶಮ್ಮ ಎಸ್.ಚಿನಮ್ಮಳ್ಳಿ, ಸೇವಕಿ ಸುನಿತಾ ಹಾಗೂ ವಿದ್ಯಾರ್ಥಿಗಳು ಇದ್ದರು.