ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ಸುಧಾರಿಸಲು ನರೇಗಾ ಯೋಜನೆ ಸಹಕಾರಿ
ಬೀದರ್:ಜೂ.7: ನರೇಗ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಜೀವನದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಬೀದರ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಂ ಸವಿತಾ ಹೇಳಿದರು.
ಅವರು ಶುಕ್ರವಾರ ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ಆಯೋಜಿಸಿದ ನರೇಗಾ ದಿವಸ್ ಹಾಗೂ ನರೇಗಾ ಕೆಲಸದಲ್ಲಿ ನೂರು ದಿವಸ ಪೂರೈಸಿದ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನರೇಗ ಯೋಜನೆಯ ಲಾಭ ಪಡೆದಲ್ಲಿ ಗ್ರಾಮೀಣ ಭಾಗದ ಜನರು ಪಟ್ಟಣಗಳಿಗೆ ಗುಳೆ ಹೊಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ನರೇಗ ಯೋಜನೆಯ ಸಹಾಯಕ ನಿರ್ದೇಶಕಿ ಲಕ್ಷ್ಮೀ ಬಿರಾದಾರ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ನರೇಗ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ರೇಣುಕಾ ರಾಹುಲ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯ ಕುಮಾರ್ ಬಾಬಶೆಟ್ಟಿ, ತಾಂತ್ರಿಕ ಸಂಯೋಜಕರಾದ ವಿಷ್ಣು ಕುಲಕರ್ಣಿ,ತಾಪಂ ಸಂಯೋಜಕರು ಸತ್ಯಜೀತ ನೀಡೋದಿಕರ್, ಕಾಯಕ ಮಿತ್ರ ಗೀತಾ ದೇವೇಂದ್ರ ಮತ್ತು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.