ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ
ವಿಜಯಪುರ,ಜೂ.7:ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಜನರು ತೀವ್ರ ತೊಂದರೆ ಅನುಭವಿಸಬೇಕಾಯಿತು.
ವಿಜಯಪುರದ ಇಬ್ರಾಹಿಂ ನಗರ ಬಡಾವಣೆಯ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ದವಸ ಧಾನ್ಯ, ಆಹಾರ ಪದಾರ್ಥ ಸೇರಿದಂತೆ ಹಲವಾರು ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಈ ಬಡಾವಣೆಯ ನಿವಾಸಿಗಳು ರಾತ್ರಿಯಿಡೀ ಮನೆಗೆ ನುಗ್ಗಿದ ನೀರನ್ನು ಹೊರ ಚೆಲ್ಲುತ್ತ ಜಾಗರಣೆ ಮಾಡಬೇಕಾಯಿತು.
ಸೊಲ್ಲಾಪುರ ರಸ್ತೆಯಲ್ಲಿನ ಪೊಲೀಸ್ ವಸತಿ ಗೃಹಗಳ ಬಡಾವಣೆಯಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿತ್ತು. ರಾತ್ರಿ 2 ಗಂಟೆ ಸುಮಾರಿಗೆ ಜೆಸಿಬಿಯಿಂದ ನೆಲ ಅಗೆದು ನೀರು ಹರಿದು ಹೋಗಲು ದಾರಿ ಮಾಡಿ ಸಂಗ್ರಹವಾದ ಭಾರಿ ಪ್ರಮಾಣದ ನೀರನ್ನು ತೆರವುಗೊಳಿಸಲಾಯಿತು.
ವಜ್ರ ಹನುಮಾನ ನಗರ ಬಡಾವಣೆ ಬಳಿ ತಗ್ಗು ಪ್ರದೇಶದ ಮನೆಗಳು ಹಾಗೂ ಇಬ್ರಾಹಿಂಪುರ ರೇಲ್ವೆ ನಿಲ್ದಾಣದ ಎದುರು ಭಾರಿ ನೀರು ಸಂಗ್ರಹವಾಗಿ ಜಲಾವೃತಗೊಂಡಿವೆ.
ಸಾರವಾಡ ಬಳಿ ಡೋಣಿ ನದಿ ತುಂಬಿ ಹರಿದು ಹೊಲ, ಗದ್ದೆಗಳಿಗೆ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಡೋಣಿ ನದಿ ದಡದ ಗ್ರಾಮಗಳ ಜನರಲ್ಲಿ ಪ್ರವಾಹದ ಭೀತಿ ಹುಟ್ಟಿಸಿದೆ.
ಕೊಲ್ಹಾರ ತಾಲೂಕಿನ ಕೌಲಗಿ ಗ್ರಾಮದ ಹನಮಂತ ಸಿದ್ದಪ್ಪ ಛಲವಾದಿ ಅವರಿಗೆ ಸೇರಿದ ಆಕಳು ಜಮೀನಿನಲ್ಲಿ ಸಿಡಿಲು ಬಡಿದು ಸತ್ತಿದೆ. ನಿಡಗುಂದಿ ತಾಲೂಕಿನ ಹಾಲಿಹಾಳ ಗ್ರಾಮದಲ್ಲಿ ಸಾಬಣ್ಣ ಬಸನಗೌಡ ಬಿರಾದಾರ ಅವರಿಗೆ ಸೇರಿದ 2 ಆಡುಗಳು ಸಿಡಿಲು ಬಡಿದು ಮೃತಪಟ್ಟಿವೆ. ಅದೇ ಗ್ರಾಮದ ಶಿವಸಂಗಪ್ಪ ರಾಯಪ್ಪ ಬೇವಿನಮಟ್ಟಿ ಅವರು ಸಿಡಿಲು ಬಡಿದು ಗಾಯಗೊಂಡಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ ಕೊಲ್ಹಾರ ತಾಲೂಕಿನಲ್ಲ 3, ಬಸವನ ಬಾಗೇವಾಡಿ ತಾಲೂಕಿನಲ್ಲಿ 4 ಮನೆಗಳು ಭಾಗಶ: ಕುಸಿದಿವೆ. ನಿಡಗುಂದಿ, ತಾಳಿಕೋಟೆ, ಮುದ್ದೇಬಿಹಾಳ, ಸಿಂದಗಿ ಮುಂತಾದ ತಾಲೂಕುಗಳಲ್ಲಿಯೂ ಬಹಳಷ್ಟು ಮನೆಗಳು ಭಾಗಶ: ಕುಸಿದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ತಾಲೂಕುವಾರು ಮಳೆ ಪ್ರಮಾಣ ವಿವರ:
ಜಿಲ್ಲೆಯ ತಾಳಿಕೋಟೆಯಲ್ಲಿ ಅತಿ ಹೆಚ್ಚು 119.4 ಮಿಲಿ ಮೀಟರ್ ಮಳೆಯಾದರೆ, ಇಂಡಿಯಲ್ಲಿ ಅತಿ ಕಡಮೆ 0.5 ಮಿಲಿ ಮೀಟರ್ ಮಳೆ ಬಿದ್ದಿದೆ.
ಸಿಂದಗಿ-24.3 ಮಿಲಿಮೀಟರ್, ಆಲಮೇಲ-8.2, ಸಾಸಬಾಳ- 5.2, ರಾಮನಹಳ್ಳಿ-15.2, ದೇವರ ಹಿಪ್ಪರಗಿ-30, ಕೊಂಡಗೂಳಿ-9, ಕಡ್ಲೇವಾಡ ಪಿಸಿಎಚ್-15.1, ಆಲಮಟ್ಟಿ-52, ಅರೇಶಂಕರ-60.2, ಬಸವನ ಬಾಗೇವಾಡಿ-53.2, ಹೂವಿನಹಿಪ್ಪರಗಿ-16.2, ಮನಗೂಳಿ-17, ಮಟ್ಟಿಹಾಳ-58, ಇಂಡಿ-0.5, ನಾದ ಬಿಕೆ- 18.2, ಅಗರಖೇಡ-2.1, ಹೊರ್ತಿ-14, ಝಳಕಿ-8, ಚಡಚಣ-19, ಹಲಸಂಗಿ-32, ಹಿಟ್ಟನಹಳ್ಳಿ-72.8, ಮುದ್ದೇಬಿಹಾಳ-45, ನಾಲತವಾಡ-17.8, ಢವಳಗಿ-52.4, ತಾಳಿಕೋಟೆ-119.4 ಮಿಲಿ ಮೀಟರ್ ಮಳೆ ದಾಖಲಾಗಿದೆ.