ಶ್ರೀರಾಮುಲುಗೆ ಸೋಲು ನಾಗೇಂದ್ರ ರಾಜೀನಾಮೆಗಣಿನಾಡಿನ ವಾಲ್ಮೀಕಿ ಧ್ರುವಗಳ ಅಧಃಪತನವೇ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,7- ಇಲ್ಲಿನ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಿಂದಲೇ ರಾಜ್ಯ ಮಟ್ಟದ ನಾಯಕರಾಗಿ ಹೊರ ಹೊಮ್ಮಿದ್ದ ವಾಲ್ಮೀಕಿ ಸಮುದಾಯದ ಎರೆಡು ಧ್ರುವಗಳು ಒಂದೇ ವಾರದಲ್ಲಿ ತಮ್ಮ  ಅಧಃಪತನ ಕಂಡಿರುವುದು ಚರ್ಚಿಗೆ ಗ್ರಾಸವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲುಗೆ ಸೋಲು ಕಾಣುವ ಮೂಲಕ ರಾಜಕೀಯವಾಗಿ ಅಧಃಪತನಕ್ಕೆ ಕಾರಣವಾಗಬಹುದಾದರೆ. ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ನೈತಿಕತೆಯಿಂದ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿ ಅಧಿಕಾರದಿಂದ ಅಧಃಪತನಕ್ಕೆ ಇಳಿಯ ಬೇಕಾಯಿತೆನ್ನಬಹುದು. ಇಬ್ಬರೂ ವಾಲ್ಮೀಕಿ ಸಮುದಾಯದಲ್ಲಿ ರಾಜ್ಯದಲ್ಲಿ ಗಮನ ಸೆಳೆಯುವಂತೆ ಬೆಳೆದವರು.
ಮಾವ ರೈಲ್ವೇ ಬಾಬು ಅವರಿಂದ ಬಳ್ಳಾರಿಯ ಮುಂಡ್ಲೂರು ಮನೆತನದ ವಿರುದ್ದ ರೆಡ್ಡಿಗಳ ಸಹಸಯದಿಂದ ಹೋರಾಡಿ ರಾಜಕೀಯವಾಗಿ  ಪ್ರವರ್ಧಮಾನಕ್ಕೆ  ಬಂದವರು ಶ್ರೀರಾಮುಲು‌.
1996 ರಿಂದ ದಶಕದಿಂದ ದಶಕಕ್ಕೆ ಆಧಿಕಾರದಿಂದ, ಆಂತಸ್ತಿನಿಂದ, ಹಣದಿಂದ, ಜನಾಕರ್ಷಣೆಯಿಂದ ಬೆಳೆದ ಶ್ರೀರಾಮುಲು ಅವರಿಗೆ ಇಡೀ ರಾಜ್ಯದ ತುಂಬ ಅಭಿಮಾನಿಗಳ ಬಳಗವಿದೆ. ಅದಕ್ಕಾಗಿ ಅವರು ಸ್ವತಂತ್ರ ಪಕ್ಷ ಕಟ್ಟಲು ಮುಂದಾಗಿ ಕೈ ಸುಟ್ಟುಕೊಂಡು. ನಂತರ ಬಿಜೆಪಿ ಸೇರಿ, ಸ್ಟಾರ್ ಪ್ರಚಾರಕರಾಗಿದ್ದವರು.
ಆದರೆ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಬಿಟ್ಟು ಇದು ನನ್ನ‌ಕ್ಷೇತ್ರ ಎಂದು ಬಂದು ಎನೆಲ್ಲ ಪ್ರಯತ್ನ ಮಾಡಿದರೂ, ನಾಗೇಂದ್ರ ವಿರುದ್ದ ಹೀನಾಯ ಸೋಲು ಕಂಡರು. ತಾವೇ ಬೆಳೆಸಿದ್ದ ನಾಗೇಂದ್ರ ಅವರಿಂದ ರಾಜಕೀಯವಾಗಿ ಸೋತರು,
ಎರೆಡು ದಶಕಗಳ ಕಾಲ ರಾಜಕೀಯವಾಗಿ, ಅಧಿಕಾರದಿಂದ ಔನ್ಯತ್ಯ ಕಂಡಿದ್ದ ಶ್ರೀರಾಮುಲು ಒಂದು ವರ್ಷ ರಾಜಕೀಯವಾಗಿ, ಅಧಿಕಾರದಿಂದಲೂ   ಅಜ್ಞಾತವಾಸ ಅನುಭವಿಸಬೇಕಾಯಿತು.
ಅಧಿಕಾರ ಇಲ್ಲದೆ ಬದುಕಲಾರೆ ಎಂಬಂತೆ ಹಾಲಿ ಸಂಸದ ವೈ. ದೇವೇಂದ್ರಪ್ಪ ಅವರಿಗೆ ಟಿಕೆಟ್ ತಪ್ಪಿಸಿ ತಮ್ಮ ಪ್ರಭಾವದಿಂದ ಟಿಕೆಟ್ ತಂದರು. ಆದರೂ ಕ್ಷೇತ್ರದ ಜನರ ಮನಗೆಲ್ಲಲು ಆಗಲಿಲ್ಲ. 
ಮತ್ತೆ ಅದೇ ನಾಗೇಂದ್ರ ಅವರು ಸವಾಲಿನಂತೆ ಲೋಕಸಭಾ ಚುನಾವಣೆಯಲ್ಲೂ ಸೋಲಿಸಿ ಶ್ರೀರಾಮುಲು ಅವರನ್ನು ರಾಜಕೀಯವಾಗಿ ಆಧಃಪತನಕ್ಕೆ ಕಳಿಸಲು ಕಾರಣರಾದರೂ ಎನ್ನಬಹುದು.  ಇದಕ್ಕೆ ಕಾರಣಗಳೇನು ಎನ್ನುವುದು ಸ್ವತಃ ಶ್ರೀರಾಮುಲು ಅವರು ಒಬ್ಬರೇ ಕುಳಿತು ಆಲೋಚಿಸಿದರೆ ಉತ್ತರ ಸಿಗಬಹುದು.
ಇನ್ನು ನಾಗೇಂದ್ರ ಅವರು ಮುಂಡ್ಲೂರು ಕುಟುಂಬದ ಸಂಸರ್ಗದಲ್ಲಿಯೇ ಬೆಳೆದರು. ಪ್ರಕರಣವೊಂದರಲ್ಲಿ ತಮ್ಮನ್ನು ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ ರೆಡ್ಡಿ ಶ್ರೀರಾಮುಲು ಬಳಗಕ್ಕೆ 2004 ರಲ್ಕಿ ಜಂಪ್ ಆದರು.
ಕ್ಷೇತ್ರ ವಿಂಗಡಣೆಯಿಂದ ಜಿಲ್ಲೆಯಲ್ಲಿ ಎಸ್ಟಿ ಮೀಸಲು ಕ್ಷೇತ್ರಗಳು ಹೆಚ್ಚಾದಾಗ, 2008 ರಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಹಿಡಿತ ಹೊಂದಿದ್ದ. ರೆಡ್ಡಿ ಶ್ರೀರಾಮುಲು ಬಳಗ ನಾಗೇಂದ್ರ ಅವರಿಗೆ  ಕೂಡ್ಲಿಗಿಗೆ ಟಿಕೆಟ್ ನೀಡಿ ಶಾಸಕರಾಗಿ ಆಯ್ಕೆಯಾಗಲು ಕಾರಣರಾದರು ಎನ್ನಬಹುದು.
ನಂತರ ಐದು ವರ್ಷಗಳಲ್ಲಿಯೇ ಒಂದು ಕಡೆ ಶಾಸಕರಾಗಿ, ಇನಗನೊಂದು ಕಡೆ ಅದಿರು ಸಾಗಾಣೆ ಬ್ಯುಸಿನೆಸ್ ನಿಂದ ಆರ್ಥಿಕವಾಗಿ ಸಬಲರಾದ ನಾಗೇಂದ್ರ ಅವರು, 2013 ರ ಚುನಾವಣೆಯಲ್ಲಿ  ಅತ್ತ ಬಿಜೆಪಿಯಲ್ಲಿ ಉಳಿಯದೆ, ಇತ್ತ ಶ್ರೀರಾಮುಲು ಅವರ ಬಿಎಸ್ ಆರ್ ಗೂ ಬರದೆ ಪಕ್ಷೇತರರಾಗಿ ಗೆದ್ದರು. ನಂತರ ಸಿಬಿಐನಿಂದ ಬಂಧಿತರಾಗಿ ಜೈಲು ವಾಸ ಅನುಭವಿಸಿದರು.  ಇದರಿಂದ ಬಹುತೇಖ ರೆಡ್ಡಿ ಶ್ರೀರಾಮುಲು ಗುಂಪಿನಿಂದ ಅಂತರ ಕಾಯ್ದುಕೊಂಡು. 2018 ರ ಚುನಾವಣೆ ವೇಳೆಗೆ ಸಂತೋಷ ಲಾಡ್ ಸಂಪರ್ಕದೊಂದಿಗೆ ರಾಹುಲ್ ನೇತೃತ್ವದಲ್ಲಿ  ಕಾಂಗ್ರೆಸ್ ಸೇರಿ ಗ್ರಾಮೀಣ ಕ್ಷೇತ್ರಕ್ಕೆ ಬಂದರು. ಇದರಿಂದ ಶ್ರೀರಾಮುಲು ಮೊಳಕಾಲ್ಮುರಿಗೆ ಹೋದರು.
ಗ್ರಾಮೀಣ ಕ್ಷೇತ್ರದಲ್ಲಿ ನಾಗೇಂದ್ರ ಸಣ್ಣ ಪಕ್ಕೀರಪ್ಪ ವಿರುದ್ದ ತ್ರಾಸಿನಿಂದ ಗೆದ್ದರು. ಕೂಡ್ಲಿಗಿಯಂತೆ ಗ್ರಾಮೀಣ ಕ್ಷೇತ್ರದ ಜನರ ಮೆಚ್ಚುಗೆ ಗಳಿಸಿ. 2023 ರ ವಿಧಾನ ಸಭಾ ಚುನಾವಣೆಯಲ್ಲಿ ಯಾರೇ ಬರಲಿ ನನ್ನ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದು ಈ ಚುನಾವಣೆಯಲ್ಲೂ ಭರ್ಜರಿಯಾಗಿ ಗೆದ್ದರು. ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶ ಮಾಡಿದರು.
ಪ್ರಬಲ ನಾಯಕ ಶ್ರೀರಾಮುಲು ಅವರನ್ನು ಸೋಲಿಸಿದರು ಎಂಬ ಕಾರಣಕ್ಕೆ ನಾಗೇಂದ್ರ ಅವರು ಸುಲಭವಾಗಿ ಸಚಿವರಾದರು, ಜಿಲ್ಲಾ ಉಸ್ತುವಾರಿ ಸಚಿವರಾದರು. ಕ್ರೀಡಾ ಮತ್ತು ಯುವಜನಸೇವೆ, ಎಸ್ಟಿ ಸಚಿವಾಲಯದ ಸಚಿವರಾಗಿ  ಉತ್ತಮ‌ಕೆಲಸ ಮಾಡಿದ್ದರು. ಆದರೆ ವಾಲ್ಮೀಕಿ ನಿಗಮದ ಅಕ್ರಮ ವರ್ಗಾವಣೆ ಹಗರಣದಿಂದ ನೈತಿಕತೆಯಿಂದ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಅಧಿಕಾರದ ಅಧಃಪತನ ಎನ್ನಬಹುದು.
ಒಟ್ಟಾರೆ ವಾರದಲ್ಲಿ ಜಿಲ್ಲೆಯ ಇಬ್ಬರು ಪ್ರಮುಖ ವಾಲ್ಮೀಕಿ ಮುಖಂಡರು ರಾಜಕೀಯವಾಗಿ  ಮತ್ತು ಅಧಿಕಾರದಿಂದ ಆಧಃಪತನಕ್ಕೆ  ಹೋಗಬೇಕಾದ್ದು ಸಮುದಾಯಕ್ಕಾದ ನಷ್ಟ ಎನ್ನಬಹುದು.