ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರಿನಲ್ಲಿ ೨೦೧೯ರಲ್ಲಿ ನಡೆದಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. ಅವರು ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ (ಸೆ .೨೪) ತೀರ್ಪು ನೀಡಿದ್ದಾರೆ.
ಜೋನಸ್ ಸ್ಯಾಮ್ಸನ್ ಮತ್ತು ಆಕೆಯ ಪತ್ನಿ ವಿಕ್ಟೋರಿಯಾ ಮಥಾಯಸ್ ಜೀವಾವಧಿ ಶಿಕ್ಷೆಗೊಳಗಾದವರು. ಇವರಿಗೆ ಸಹಕರಿಸಿದ ಇನ್ನೋರ್ವ ಆರೋಪಿ ರಾಜು ಎಂಬಾತನಿಗೆ ಆರೂವರೆ ತಿಂಗಳ ಸಾದಾ ಸಜೆ ವಿಧಿಸಲಾಗಿದೆ.
ಕುರಿ ಚಿಟ್ ಫಂಡ್ ನಡೆಸುತ್ತಿದ್ದ ನಗರದ ಅತ್ತಾವರದ ಶ್ರೀಮತಿ ಶೆಟ್ಟಿಯವರಿಗೆ ಸೂಟರ್ ಪೇಟೆಯ ಜೋನಸ್ ನೀಡಬೇಕಾಗಿದ್ದ ಹಣವನ್ನು ಕೇಳಲು ಆತನ ಮನೆಗೆ ಹೋಗಿದ್ದಾಗ ಜೋನಸ್ ಮತ್ತು ವಿಕ್ಟೋರಿಯಾ ಆಕೆಯನ್ನು ಕೊಲೆ ಮಾಡಿದ್ದರು. ಆಕೆಯ ಮೈಮೇಲಿದ್ದ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದರು. ಬಳಿಕ ದೇಹವನ್ನು ೨೯ ತುಂಡುಗಳನ್ನಾಗಿ ಮಾಡಿದ್ದರು. ಅದನ್ನು ರಾತ್ರಿ ಜೋನಸ್ ನಗರದ ಹಲವೆಡೆ ಎಸೆದು ಹೋಗಿದ್ದ.ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು.