ಮುಖ್ಯಮಂತ್ರಿಗಳೇ..ರಾಜೀನಾಮೆ ನೀಡಿ ಉತ್ತಮ ಮೇಲ್ಪಂಕ್ತಿ ಹಾಕಿ- ಮಾಜಿ ಸಂಸದ ಪ್ರತಾಪ್‌ಸಿಂಹ ಸಲಹೆ
ಪುತ್ತೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರು ಸಲ್ಲಿಸಿದ ರಿಟ್ ಅರ್ಜಿ ನ್ಯಾಯಾಲಯದಲ್ಲಿ ವಜಾಗೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಉತ್ತಮ ಮೇಲ್ಪಂಕ್ತಿ ಹಾಕಬೇಕು. ನಿಮ್ಮನ್ನು ನಾವು ಸೈದ್ಧಾಂತಿಕವಾಗಿ ವಿರೋಧ ಮಾಡುತ್ತೇವೆ. ಆದರೆ ಬಡವರ ಪರವಾಗಿರುವ ನಿಮ್ಮ ಕಾಳಜಿಯನ್ನು ಮೆಚ್ಚಿಕೊಂಡಿದ್ದೇವೆ. ಹಾಗಾಗಿ ಕಳಪೆ ರಾಜಕಾರಣ ಅನುಸರಿಸಬೇಡಿ. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ಸಲಹೆ ನೀಡಿದ್ದಾರೆ.
ಮಂಗಳವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ತಮ್ಮ ಪತ್ನಿ ಹೆಸರಲ್ಲಿರುವ ೧೪ ಸೈಟ್ ಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿ ಎಂದು ನಾನೇ ಅವರಿಗೆ ಗಿಣಿಗೆ ಹೇಳಿದ ಹಾಗೇ ಹೇಳಿದ್ದೆ. ಆದರೆ ನನ್ನ ಸಲಹೆಯನ್ನು ಅವರು ಕೇಳಲಿಲ್ಲ. ಅವರು ತಿಳಿಗೇಡಿಗಳ ಸಲಹೆಯನ್ನು ಮೆಚ್ಚಿಕೊಂಡರು. ಒಂದು ವೇಳೆ ನಾನು ಸಲಹೆ ನೀಡಿದಂತೆ ಸೈಟ್ ಹಸ್ತಾಂತರ ಮಾಡುತ್ತಿದ್ದರೆ, ಸಿಎಂ ಪಟ್ಟವೂ ಉಳಿಯುತ್ತಿತ್ತು. ಎಲ್ಲಾ ಪಕ್ಷದ ಕಳ್ಳರೂ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಕಳಂಕದಿಂದ ಮುಕ್ತರಾಗುತ್ತಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಡುವ ಸ್ಥಿತಿ ಬಂದಿದೆ. ಇದು ಸಿದ್ಧರಾಮಯ್ಯ ಅವರು ಮಾಡಿಕೊಂಡ ಸ್ವಯಂಕೃತ ಅಪರಾಧ ಎಂದು ಅವರು ಹೇಳಿದರು.
ಶತ್ರುಗಳು ನಿಮ್ಮ ಅಕ್ಕಪಕ್ಕ..!
ಈ ಹಗರಣದ ಮೇಲಿನ ತನಿಖೆ ನಡೆಯಲಿ. ತನಿಖೆ ಮುಗಿದ ಬಳಿಕ ಮತ್ತೆ ಸಿದ್ಧರಾಮಯ್ಯ ಆಗುವ ಅವಕಾಶವೂ ಇದೆ. ಒಂದು ವೇಳೆ ಹಾಗೇ ಮಾಡದಿದ್ದಲ್ಲಿ ನಿಮ್ಮ ೪೫ ವರ್ಷದ ರಾಜಕಾರಣ ಕಳಂಕಯುತ ಅಂತ್ಯಕ್ಕೆ ನಾಂದಿ ಹಾಡಲಿದೆ. ರಾಜಕಾರಣದಲ್ಲಿ ಶತ್ರುಗಳು ಯಾವತ್ತಿಗೂ ಅಕ್ಕಪಕ್ಕದಲ್ಲಿಯೇ ಇರುತ್ತಾರೆ. ಸಂಸದನಾಗಿ ನನಗೂ ಈ ಅನುಭವ ಆಗಿದೆ. ನಿಮ್ಮ ಶತ್ರುಗಳು ಬಿಜೆಪಿ-ಜೆಡಿಎಸ್ ನಲ್ಲಿಲ್ಲ. ಕಾಂಗ್ರೇಸ್ ನಲ್ಲಿಯೇ ಇದ್ದಾರೆ. ನಿಮ್ಮ ಅಕ್ಕಪಕ್ಕವೇ ಇದ್ದಾರೆ. ನಿಮ್ಮ ಜತೆಗೆ ನಾವಿದ್ದೇವೆ ಎಂದು ಹೇಳುವವರನ್ನು ನಂಬಬೇಡಿ. ಅವರೆಲ್ಲರಿಗಿಂತಲೂ ಉತ್ತಮ ರಾಜಕೀಯ ನಡೆಸಿದವರು ನೀವಾಗಿದ್ದೀರಿ. ಹಾಗಾಗಿ ದಯವಿಟ್ಟು ರಾಜೀನಾಮೆ ಕೊಡಿ ಎಂದು ಅವರು ಹೇಳಿದರು.
ಕೇಜ್ರಿವಾಲ್ ಹಾದಿ ಬೇಡ..
ಒಂದು ವೇಳೆ ನೀವು ಕುರ್ಚಿಗೆ ಅಂಟಿಕೊಂಡರೆ ಹೇಮಂತ್ ಸೊರೇನ್, ಅರವಿಂದ ಕೇಜ್ರಿವಾಲ್ ಅವರ ಹಾದಿಯನ್ನು ಹಿಡಿಯಬಹುದು. ಅವರೆಲ್ಲಾ ನಿನ್ನೆ-ಮೊನ್ನೆ ಬಂದ ರಾಜಕಾರಣಿಗಳು. ಅವರಲ್ಲಿ ಯಾವುದೇ ಮೌಲ್ಯಯುತ ರಾಜಕಾರಣ ಇಲ್ಲ. ಅಂತವರ ಸಾಲಿಗೆ ನೀವು ಸೇರಬೇಡಿ ಎಂದು ಹೇಳಿದ ಅವರು ರಾಜೀನಾಮೆ ಕೊಡಿ ಎಂದು ಪುನರುಚ್ಚರಿಸಿದರು.