ಯೋಗ ದಿನಾಚರಣೆ: ಪೂರ್ವಭಾವಿ ಸಭೆ
ಗದಗ,ಜೂ7: ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಯೋಗವು ಮನಸ್ಸು, ದೇಹ, ಆತ್ಮವನ್ನು ಒಳಗೊಳ್ಳುವ ಅಭ್ಯಾಸವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ನಿರ್ವಹಣಾಧಿಕಾರಿಗಳಾದ ಭರತ್ ಎಸ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ ಇಲಾಖೆ ಮತ್ತು ವಿವಿಧ ಸಂಘಗಳ ಸಹಯೋಗದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ್ 21 ರಂದು ನಡೆಯುವ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯೋಗೋತ್ಸವದಲ್ಲಿಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಯುಷ್ ಇಲಾಖೆಯ ಅಧಿಕಾರಿ ಡಾ.ಉಪ್ಪಿನ ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 10 ರಿಂದ ಜೂನ್ 20 ರವರೆಗೆ ಯೋಗೋತ್ಸವ ಕಾರ್ಯಕ್ರಮ ಆಚರಿಸುತ್ತಿದ್ದು ವಿವಿಧ ಸಂಘಟನೆಯ ಸಹಯೋಗದಲ್ಲಿ ಯೋಗ ರಸಪ್ರಶ್ನೆ ಸ್ಪರ್ಧೆ,ಕ್ರೀಡಾಸ್ಪರ್ಧೆ,ಸಮೂಹ ನೃತ್ಯ ಸ್ಪರ್ಧೆ,ಆಶುಭಾಷಣ ಸ್ಪರ್ಧೆ,ಬೋದನಾ ಕೌಶಲ್ಯ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಡಿಜಿಟಲ್ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ಜೂನ್ 21, ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ, ಜಿ.ಪಂ ಯೋಜನಾಧಿಕಾರಿಗಳಾದ ನಿರ್ಮಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.