9ರಂದು ನಮ್ಮ ಬಸವ ಜಯಂತಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.07:- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದಿಂದ ನಮ್ಮ ಬಸವ ಜಯಂತಿ-2024 ಕಾರ್ಯಕ್ರಮವನ್ನು ಜೂ.9ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಂ.ಪ್ರದೀಪ್‍ಕುಮಾರ್ ತಿಳಿಸಿದರು.
ನಗರದಲ್ಲಿ ಖಾಸಗಿ ಹೋಟೆಲ್‍ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅ.ಭಾ.ವೀ.ಲಿಂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉಪಸ್ಥಿತರಿರಲಿದ್ದಾರೆ. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ಬಿ.ಈಶ್ವರ ಖಂಡ್ರೆ, ಕೆ.ವೆಂಕಟೇಶ್, ಚಲನಚಿತ್ರ ನಟ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಅತಿಥಿಗಳಾಗಿ ಹಾಜರಿರುತ್ತಾರೆ ಎಂದು ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ಬಸವ ಬಳಗ ಒಕ್ಕೂಟದ ಮಹಿಳಾ ಮತ್ತು ಮಕ್ಕಳ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜ್ಯೂನಿಯರ್ ಅಂಡರ್ ಆಫೀಸರ್ ಎಸ್.ತನ್ಮಯಿ, ಅಂತಾರಾಷ್ಟ್ರೀಯ ಈಜು ಪಟು ಎಸ್.ತಾನ್ಯಾ, ಮಾಸ್ಟರ್ ಆಫ್ ಐಕ್ಯೂ ರಿಷಿ ಶಿವಪ್ರಸನ್ನ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ವಿ.ಸೋಮಣ್ಣ ಸಮಾರೋಪ ಭಾಷಣ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘನ ಉಪಸ್ಥಿತರಿರಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಭಾಗವಹಿಸಲಿದ್ದಾರೆ. ಚಲನಚಿತ್ರ ನಟರಾದ ಡಾರ್ಲಿಂಗ್ ಕೃಷ್ಣ, ಎನ್.ಎಸ್.ನಾಗಭೂಷಣ್, ಇಸ್ರೋ ಉಪ ಪ್ರಧಾನ ವ್ಯವಸ್ಥಾಪಕಿ ಬಿ.ಎಂ.ರೂಪ ವಿಶೇಷ ಆಹ್ವಾನಿತರಾಗಿದ್ದಾರೆ ಎಂದರು.
ಭವ್ಯ ಮೆರವಣಿಗೆ:
ಗನ್‍ಹೌಸ್ ಬಳಿಯ ಜೆಎಸ್‍ಎಸ್ ಮಹಾವಿದ್ಯಾಪೀಠದ ಮುಂಭಾಗದಲ್ಲಿ ಇರುವ ಬಸವೇಶ್ವರ ಮಂಟಪದ ಆವರಣದಲ್ಲಿ ಬೆಳಗ್ಗೆ 8.30ಕ್ಕೆ ಬಸವ ಜಯಂತಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮೊದಲಿಗೆ ದೇವನೂರು ಮಠದ ಮಹಾಂತ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ. ವಾಟಾಳು ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಕುಂದೂರು ಮಠದ ಶರತ್‍ಚಂದ್ರ ಸ್ವಾಮೀಜಿ ಹಾಜರಿರುತ್ತಾರೆ. ಪ್ರಾದೇಶಿಕ ಆಯುಕ್ತ ಡಾ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೆÇಲೀಸ್ ಆಯುಕ್ತ ಡಾ.ರಮೇಶ್ ಬಾನೋತ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
38ಕ್ಕೂ ಹೆಚ್ಚು ಸಾಂಸ್ಕೃತಿಕ-ಜನಪದ ಕಲಾತಂಡಗಳು, ಅನುಭವ ಮಂಟಪ, ಸಿದ್ಧಗಂಗಾ ಶ್ರೀ, ಸಿದ್ದೇಶ್ವರ ಸ್ವಾಮೀಜಿ, ದೇವನೂರು ಮಠದ ಗುರುಮಲ್ಲೇಶ್ವರರು, ಸುತ್ತೂರು ಮಠದ ಪರಂಪರೆ, ಅಖಿಲಭಾರತ ವೀರಶೈವ ಮಹಾಸಭಾ ನಡೆದು ಬಂದ ದಾರಿಯನ್ನು ತಿಳಿಸುವ ಸ್ತಬ್ಧ ಚಿತ್ರಗಳು ಮರೆವಣಿಗೆಯಲ್ಲಿ ಭಾಗವಹಿಸಲಿವೆ. ನೊಣವಿನಕೆರೆಯ ಮಠದಿಂದ ಆಗಮಿಸುವ ಆನೆಯ ಮೇಲೆ ಅಂಬಾರಿಯನ್ನು ಕಟ್ಟಿ, ಅದರಲ್ಲಿ ಬಸವಣ್ಣ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ಸರ್ಕಾರಿ ನೌಕರರ ಸಂಘದ ಸದಸ್ಯರು, ವಕೀಲರ ಸಂಘದ ಸದಸ್ಯರು ಸೇರಿದಂತೆ ಸುಮಾರು 8 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಬಂದಂತಹ ಎಲ್ಲರಿಗೂ ಜೆಎಸ್‍ಎಸ್ ವಿದ್ಯಾಪೀಠದದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದೆ.
20 ಸಾವಿರ ಜನರ ನಿರೀಕ್ಷೆ:
ಬಸವ ಜಯಂತಿ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಮೈಸೂರು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಮೈಸೂರು ಹೊರವಲಯ, ನಗರ ಪ್ರದೇಶಕ್ಕೆ 250 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಕುಳಿತು ಊಟ ಮಾಡುವ ಅನುಕೂಲ ಕಲ್ಪಿಸಲಾಗಿದೆ. ಒಂದು ಸಲಕ್ಕೆ ಸುಮಾರು 2500 ಜನರು ಊಟ ಮಾಡಬಹುದಾಗಿದೆ. ಇದಕ್ಕಾಗಿ ಅಗತ್ಯಕ್ಕೆ ತಕ್ಕಂತೆ ಸ್ವಯಂ ಸೇವಕರು, ಬಳಗಗಳ ಸದಸ್ಯರು ಸಿದ್ದರಾಗಿ ಇರುತ್ತಾರೆ ಎಂದು ಪ್ರದೀಪ್‍ಕುಮಾರ್ ತಿಳಿಸಿದರು.
ಒಕ್ಕೂಟದ ಕೋಶಾಧ್ಯಕ್ಷ ಎಚ್.ಎಸ್.ವೀರೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೆ.ಸ್ವಾಮಿ, ಪ್ರತಿಧ್ವನಿ ಪ್ರಸಾದ್ ಗೋಷ್ಠಿಯಲ್ಲಿ ಹಾಜರಿದ್ದರು.