ರಸ್ತೆ ಅಗಲೀಕರಣಕ್ಕೆ ಒತ್ತಾಯ
ಕಲಬುರಗಿ,ಜೂ.6-ನಗರದ ಸರಾಫ್ ಬಜಾರ್, ಕಿರಾಣ ಬಜಾರ್ ಮತ್ತು ಚಪ್ಪಲ್ ಬಜಾರ್ ಪ್ರದೇಶದಲ್ಲಿ ರಸ್ತೆ ಅಗಲೀಕರಣ ತುಂಬಾ ಅಗತ್ಯವಾಗಿದ್ದು, ಕೂಡಲೇ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರವೇ (ಕಾವಲುಪಡೆ) ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರದೇಶಗಳಲ್ಲಿ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಹಬ್ಬ-ಹುಣ್ಣಿಮೆ ಸಂದರ್ಭದಲ್ಲಿ ಜನರು ಸಾಮಗ್ರಿಗಳ ಖರೀದಿಗೆ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಅಗಲೀಕರಣ ಮಾಡುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದರು. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಕಳ್ಳರ ಹಾವಳಿಯೂ ಹೆಚ್ಚಾಗಿದೆ. ಹಲವಾರು ಜನರ ಮೊಬೈಲ, ಮಹಿಳೆಯರ ಕೊರಳಲ್ಲಿನ ಬಂಗಾರದ ಆಭರಣ, ಬಂಗಾರ ತಾಳಿ ಕಳವಾಗಿವೆ. ಈ ಎಲ್ಲಾ ಕಾರಣಗಳಿಂದಾಗಿ ರಸ್ತೆ ಅಗಲೀಕರಣಕ್ಕೆ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಕರವೇ ಕಾವಲುಪಡೆ ವತಿಯಿಂದ ಮುಂಬರುವ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.