ಶಾಲಾ ಮಕ್ಕಳಿಂದ ಪರಿಸರ ದಿನ ಆಚರಣೆ
ವಿಜಯಪುರ,ಜೂ.೭: ಪಟ್ಟಣದ ರೋಡಹಳ್ಳಿ ಬಳಿಯ ಗುರುಕುಲ ಇಂಟರ್ನ್ಯಾಷನಲ್ ಶಾಲಾ ಮಕ್ಕಳು ವಿಶ್ವ ಪರಿಸರ ದಿನದ ಮಹತ್ವ , ಜಾಗೃತಿ ಮತ್ತು ಜಾಥಾ ಕಾರ್ಯಕ್ರಮವನ್ನು ಪಟ್ಟಣದ ಅಂಕತಟ್ಟಿ ನಂಜುಡಪ್ಪ ವೃತ್ತದಿಂದ ಹೊರಟು ಹೊಸ ಬಸ್ ನಿಲ್ದಾಣದಲ್ಲಿ ಮಾನವಸರಪಳಿ ನಿರ್ಮಿಸಿ ನಾಟಕದ ಮೂಲಕ ಪರಿಸರದ ಜಾಗೃತಿ ಅರಿವನ್ನು ಮನಕ್ಕೆ ಮುಟ್ಟುವಂತೆ ಮಾಡಿದರು.
ಗುರುಕುಲ ಇಂಟರ್ನ್ಯಾಷನಲ್ ಶಾಲಾ ವಿದ್ಯಾರ್ಥಿನಿ ಪವಿತ್ರ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕೆ ಕೆರೆಗಳನ್ನು ಮುಚ್ಚಿ ಒತ್ತುವರಿ ಮಾಡಿಕೊಂಡು ನೀರಿನಶೇಖರಣೆಗೆ ಅಡ್ಡಿಯಾಗಿದ್ದಾನೆ. ಪೂರ್ವಿಕರು ನೂರು ವರ್ಷಗಳಕಾಲ ಬದುಕಿ ಸಾರ್ಥಕಪಡಿಸಿಕೊಳ್ಳುತ್ತಿದ್ದರು ಆದರೆ ಪ್ರಕೃತಿ ನಮಗೆ ಎಲ್ಲವನ್ನು ನೀಡುತ್ತಿದೆ ಆದರೆ ಮನುಷ್ಯ ಪ್ರಕೃತಿಗೆ ವಿನಾಶಕಾರಿ ಯಾಗಿ ಪರಿಣಮಿಸಿದ್ದಾನೆ , ಪರಿಸರದ ಆಚರಣೆ ಒಂದುದಿನಕ್ಕೆ ಸೀಮಿತವಾಗದೇ ಅದರ ಉಳಿವಿಗೆ ನಾವು ಮುಂದಿನ ಪೀಳಿಗೆಗೆ ಬಳುವಳಿ ನೀಡುವಂತಹ ಕೆಲಸ ನಾವೆಲ್ಲಾ ಮಾಡಬೇಕಿದೆ ಎಂದು ತಿಳಿಸಿದರು.
ಗುರುಕುಲ ಇಂಟರ್ನ್ಯಾಷನಲ್ ಶಾಲಾ ಪ್ರಾಂಶುಪಾಲ ನವೀನ್ ಕುಮಾರ್ ಮಾತನಾಡಿ, ಮನೆಗೊಂದು ಮರ ಊರಿಗೊಂದು ವನ ಇದ್ದರೆ ಮನುಷ್ಯ ಸಂತತಿ ಉಳಿಯಲು ಸಾಧ್ಯ, ನಮ್ಮ ಊರಿನ ಕೆರೆಗಳನ್ನು ಉಳಿಸುವ ಕೆಲಸ ಮಾಡುವ ಬದಲು ಬೇಡವಾದ ವಸ್ತುಗಳನ್ನು ಕೆರೆಗೆ ತುಂಬುತ್ತಿದ್ದಾರೆ ಇದು ಮುಂದೊಂದು ದಿನ ಅಪಾಯಕಾರಿ ಬೆಳವಣಿಗೆ, ಸಾರ್ವಜನಿಕರು ಕನಿಷ್ಟ ಪ್ರಜ್ಞೆಯಿಂದ ಉಪಯುಕ್ತವಲ್ಲದ ವಸ್ತುಗಳನ್ನು ಸ್ಥಳೀಯ ಪುರಸಭೆ ವಾಹನ ಪ್ರತಿ ದಿನ ಮನೆ ಬಾಗಿಲಿಗೆ ಬರುತ್ತದೆ ಅದಕ್ಕೆ ಹಾಕಿದರೆ ಎಷ್ಟೋ ಮಲಿನವಾಗುವುದು ತಪ್ಪಿದಂತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೀರಿನಸಂರಕ್ಷಣೆ ಹಾಗೂ ಕಸ ಎಲ್ಲಂದರಲ್ಲಿ ಹಾಕದಂತೆ ಜಾಗೃತಿ ಮೂಡಿಸುವ ನಾಟಕವನ್ನು ವಿದ್ಯಾರ್ಥಿಗಳು ಮಾಡಿದರು. ಕೆರೆ ಉಳಿಸಿ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ಪುರಸಭೆಗೆ ಮನವಿ ಪತ್ರ ನೀಡಿದರು. ಕಾರ್ಯಕ್ರಮದಲ್ಲಿ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಹೇಮಾವತಿ ಸುರೇಶ್, ಆಡಳಿತಾಧಿಕಾರಿ ಮಹೇಶ್ , ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.