ಪರಿಸರ ಕಾಪಾಡಿದರೆ ಮುಂದಿನ ಪೀಳಿಗೆ ನೆಮ್ಮದಿ
ವಿಜಯಪುರ,ಜೂ.೭:ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು, ಪರಿಸರವನ್ನು ಕಾಪಾಡಿದರೆ ಮುಂದಿನ ಪೀಳಿಗೆ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಇನ್ಸ್ ಪೈರ್ ಕಾಲೇಜಿನ ಪ್ರಾಂಶುಪಾಲರಾದ ಶಿಲ್ಪ ತಿಳಿಸಿದರು.
ಇವರು ಪಟ್ಟಣದ ಇನ್ಸ್ ಪೈರ್ ಕಾಲೇಜ್ ಹಾಗೂ ಪುರಸಭೆ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದೇವನಹಳ್ಳಿಯ ಮುಖ್ಯರಸ್ತೆಗಳ ಬಳಿ ಹಾಗೂ ಕಾಲೇಜು ಆಟದ ಮೈದಾನದ ಬಳಿ ಗಿಡಗಳನ್ನು ನೆಡುವ ಮೂಲಕ ಮಾತನಾಡಿದರು.
ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಒಂದು ದಿನಕ್ಕೆ ಸೀಮಿತ ಬೇಡ: ಪರಿಸರ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದ್ದು, ಜೂನ್ ೫ ರಂದು ಶಾಲೆ,ಮತ್ತು ಹಲವೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇಂದಿಗೆ ಮಾತ್ರ ಸೀಮಿತವಾಗದೇ ದಿನನಿತ್ಯ ಪರಿಸರ ಸಂರಕ್ಷಿಸುವ ಕಾಳಜಿ ಎಲ್ಲರಲ್ಲೂ ಇರಬೇಕು ಎಂದು ಅವರು ಹೇಳಿದರು.
ಪುರಸಭಾ ಆರೋಗ್ಯಧಿಕಾರಿ ಲಾವಣ್ಯ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಗಳ ಆಸುಪಾಸಿನಲ್ಲಿ ಗಿಡಗಳನ್ನು ನೆಟ್ಟರೆ ಉತ್ತಮ ಗಾಳಿ ದೊರೆಯಲು ಸಾಧ್ಯವಾಗುತ್ತದೆ ಎಂದ ಅವರು ಪರಿಸರ ಸಂರಕ್ಷಣೆ ಕುರಿತು ಇತರರಿಗೂ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಅವರು ಕಿವಿ ಮಾತು ಹೇಳಿದರು.
ಇನ್ಸ್ ಪೈರ್ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.ಕಾಲೇಜಿನ ಶಿಕ್ಷಕ ವೃಂದ ಹಾಗೂ ಪುರಸಭಾ ಸಿಬ್ಬಂದಿ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
