ನಮ್ಮ ಕಲಬುರಗಿ ಹಸಿರು ಕಲಬುರಗಿ ಆಂದೋಲನಕ್ಕೆ ಚಾಲನೆ
ಕಲಬುರಗಿ,ಜೂ.6 “ವಿಶ್ವ ಪರಿಸರ ದಿನಾಚರಣೆಯ’ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವತಿಯಿಂದ ಉದನೂರಿನ ಶ್ರೀ ಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ “ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮ ವನ್ನು ಆಯೋಜಿಸಲಾಯಿತು.
ಗಿಡ ನಾಟಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಅವರು ಮಾತನಾಡಿ, ಕಲಬುರಗಿಯ ವಾತಾವರಣ ಬದಲಾವಣೆಯಾಗಬೇಕಾದಲ್ಲಿ, ಉತ್ತಮ ಪರಿಸರ ನಿರ್ಮಾಣವಾಗಬೇಕಾಗಿದಲ್ಲಿ, ಮೊದಲು ಗಿಡ ಬೆಳೆಸಬೇಕು, ಈ ನಿಟ್ಟಿನಲ್ಲಿ “ನಮ್ಮ ಕಲಬುರ್ಗಿ ಹಸಿರು ಕಲಬುರ್ಗಿ”ಎನ್ನುವ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.
ಈ ವರ್ಷ 30,000 ಗಿಡ ನಾಟಿ ಮಾಡುವ ಸಂಕಲ್ಪ ಹೊಂದಲಾಗಿದೆ. ಪ್ರತಿಯೊಬ್ಬರು ಗಿಡ ಬೆಳೆಸಬೇಕು, ಪ್ರತಿ ಮನೆಯ ಶುಭ ಕಾರ್ಯಗಳಲ್ಲಿ ಗಿಡನೆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಾಣ ಮಾಡಬೇಕು. ಗಿಡ ನೆಡುವುದರ ಜೊತೆ ಅದರ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ಕೇಂದ್ರದ ಸದಸ್ಯರಿಂದ ಗಿಡಗಳಿಗೆ ಶ್ರೀರಕ್ಷೆಯನ್ನು ಕಟ್ಟಿಸಿದರು. ಸದಸ್ಯರಿಗೆ ಗಿಡಗಳ ರಕ್ಷಣೆ ಮಾಡುವಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯುವಶಕ್ತಿ ರಾಜ್ಯಾಧ್ಯಕ್ಷ ಅವ್ವಣ್ಣ ಗೌಡ ಎನ್.ಪಾಟೀಲ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ರಿಯಾಜ್ ಅತ್ತಾರ, ಜಿಲ್ಲಾ ಗ್ರಾಹಕ ವೇದಿಕೆ ಅಧ್ಯಕ್ಷೆ ಮಾಲತಿ ರೇಷ್ಮೆ, ನಾನಗೌಡ ಪಾಟೀಲ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಮತ ಪ್ರವೀಣ್, ಸೇವಾಪ್ರತಿನಿಧಿ ಪ್ರತಿನಿಧಿ ಸಾವಿತ್ರಿ ಮತ್ತು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.