ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ : ಮತ ಎಣಿಕೆ ಆರಂಭ
ಕಲಬುರಗಿ,ಜೂ 6:ಕರ್ನಾಟಕದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ಕಾರ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ, ಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದಲ್ಲಿ ಬೆಳಿಗ್ಗೆ 8 ರಿಂದ ಆರಂಭವಾಗಿದೆ.ಸಂಜೆ ಹೊತ್ತಿಗೆ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.
ಕಲಬುರಗಿ,ಬೀದರ,ಬಳ್ಳಾರಿ,ರಾಯಚೂರು,ಕೊಪ್ಪಳ ,ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳ 72,691 ಪುರುಷ ಮತದಾರರು, 36,388 ಮಹಿಳಾ ಮತದಾರರು ಸೇರಿ ಒಟ್ಟು 1,09,082 ಮತದಾರರು ಮತ ಚಲಾಯಿಸಿದ್ದಾರೆ.ಮೊದಲಿಗೆ ಚಲಾವಣೆಯಾದ ಮತಗಳಲ್ಲಿ ಶೇ 50 +1 ಮತ ಪಡೆದವರು ವಿಜೇತರಾಗಲಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಮತ ಎಣಿಕೆಯ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಚುನಾವಣಾ ಅಧಿಕಾರಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಹಾಗೂ ಚುನಾವಣೆ ವೀಕ್ಷಕ ಎಂ ಮಹೇಶ್ವರ ರಾವ ಹಾಗೂ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆಯಲಾಯಿತು.ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಕಲಬುರಗಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಮುಂತಾದವರು ಉಪಸ್ಥಿತರಿದ್ದರು.
ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧಿಸಲಾಗಿದೆ.