ಕರ್ನಾಟಕ ಐಟಿಐ ಕಾಲೇಜಿನಲ್ಲಿ ಪರಿಸರ ದಿನಾಚರಣೆ
ಬೀದರ್: ಜೂ.6:ನಗರದ ಕರ್ನಾಟಕ ಐಟಿಐ ಕಾಲೇಜಿನಲ್ಲಿ ಕರ್ನಾಟಕ ಐಟಿಐ ಕಾಲೇಜು ಹಾಗೂ ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಪರಿಸರ ದಿನಾಚರಣೆ ಜರುಗಿತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದು ಪರಿಸರ ಅಸಮತೋಲನದಿಂದ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಜನರು ಮನೆಯಲ್ಲಿರುವ ಏರ್ ಕಂಡಿಶನ್‍ಗೆ ಮಾರು ಹೋಗಿದ್ದರಿಂದ ಹೆಚ್ಚು ಬಳಿಕೆಯಿಂದ ದೆಹಲಿಯಲ್ಲಿ ಒಂದು ಎಸಿ ಬ್ಲಾಸ್ಟ್ ಆಗಿರುವುದು ವರದಿಯಾಗಿದೆ. ಆದ್ದರಿಂದ ಮಾನವ ನಿಜವಾಗಿ ನೈಸರ್ಗಿಕ ಹಾಗೂ ಶುದ್ದ ಆಮ್ಲಜನಕವನ್ನು ಉಪಯೋಗಿಸಬೇಕಿದೆ. ಇದಕ್ಕಾಗಿ ಪ್ರತಿ ಮನೆ, ಓಣಿ, ಸಾರ್ವಜನಿಕ ಸ್ಥಳಗಳು, ಶಾಲೆ, ಆಸ್ಪತ್ರೆ, ಕಂಪನಿ ಹೀಗೆ ಎಲ್ಲ ಕಡೆ ಗಿಡ, ಮರಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.
ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಇದ್ದ ಸ್ಥಳದಲ್ಲಿಯೆ ಸ್ಥಳದ ಕೊರತೆ ಇದ್ದರೂ ಕುಂಡಗಳನ್ನು ಇಟ್ಟು ಅದರಲ್ಲಿ ಸಸಿ ನೆಟ್ಟು ನೈಜ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅದ್ಯಕ್ಷ ಸತೀಶ ಬೆಳಕೋಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಅಗತ್ಯ ಎಷ್ಟಿತ್ತು ಎಂಬುದನ್ನು ಜನ ಮನಗಾಣಿದ್ದಾರೆ. ಹಣ ಪಡೆದು ಆಮ್ಲಜನಕ ಖರಿದಿದಸಲು ಮುಂದಾಗುವ ಜನರು ಒಂದು ಗಿಡ ಹಚ್ಚಲು ಮುಂದಾಗುವುದಿಲ್ಲ. ನಾವು ಮುಂದೆ ಸುರಕ್ಷಿತವಾಗಿರಲು ಪ್ರತಿ ಮನೆಯಲ್ಲಿ ಗಿಡ ನೆಡದೇ ಹೋದಲ್ಲಿ ನಮಗೆ ಉಳಿಗಾಲವಿಲ್ಲ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಐಟಿಐ ಕಾಲೇಜಿನ ಪ್ರಾಚಾರ್ಯರಾದ ವಿಜಯಕುಮಾರ ಪಾಟೀಲ, ಐಟಿಐ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿಗಳಾದ ರವಿ ಪಾಟೀಲ, ಉಮಾಕಾಂತ, ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ತರಬೇತಿದಾರರು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಕಾಲೇಜಿನ ಅವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರುಣಿಸಲಾಯಿತು.