ನಿಜ ಜೀವನದ ಸಹಜ ಬೆಳಕನ್ನು ಸಿನಿಮಾ ಮೂಲಕ ಪ್ರದರ್ಶಿಸಿದವರು  ಪುಟ್ಟಣ್ಣ ಕಣಗಾಲ
(ಸಂಜೆವಾಣಿ ವಾರ್ತೆ)
ಬಳ್ಳಾರಿ .ಜೂ 6: ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳು ನಿಜ ಜೀವನದ ಸಹಜತೆಯ ಮೇಲೆ ಬೆಳಕು ಚೆಲ್ಲುತ್ತಲೇ ವಾಸ್ತವಕ್ಕೆ ಕನ್ನಡಿ ಹಿಡಿಯುವಂತಿವೆ.  ಸಿನಿಮಾ ರಂಗ ಕಂಡ ಅದ್ವಿತೀಯ ನಿರ್ದೇಶಕರಾಗಿದ್ದರು ಎಂದು ಸರಳಾದೇವಿ  ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಕೆ. ಮಂಜುನಾಥ ರೆಡ್ಡಿ ಅಭಿಪ್ರಾಯ ಪಟ್ಟರು.
ಅವರು ನಿನ್ನೆ ಸಂಜೆ ನಗರದ ಡಿ.ಆರ್.ಕೆ ರಂಗಸಿರಿಯಲ್ಲಿ ರಘುರಾಮ ಕಲಾಮಿತ್ರ ಮಂಡಳಿ ಹಾಗೂ ರಂಗಸಿರಿಯು ಜಂಟಿಯಾಗಿ ಆಯೋಜಿಸಿದ್ದ ಪುಟ್ಟಣ್ಣ ಕಣಗಾಲ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .
    ಕಣಗಾಲ್ ಅವರ  ಸಿನಿಮಾಗಳಲ್ಲಿ  ಸ್ರೀ ಸಂವೇದನೆ, ಜನಪರ ಚಿಂತನೆ, ಮಾನವೀಯ ಮೌಲ್ಯ ಕಾಣಬಹುದಾಗಿತ್ತೆಂದರು.
    ವಿಶೇಷ  ಉಪನ್ಯಾಸ ನೀಡಿದ ರಂಗಭೂಮಿಯ ಕಲಾವಿದ ಕೆ.ಜಗದೀಶ  ಅವರು, ವರ್ತಮಾನದ ಸನ್ನಿವೇಶದಲ್ಲಿ ಸಿನಿಮಾ ರಂಗವು ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ .ಪ್ರೇಕ್ಷಕರು ಹೊಸ ಅಲೆಯ ಸದಭಿರುಚಿಯ ಸಿನಿಮಾಗಳಿಂದ ವಂಚಿತರಾಗುತ್ತಿದ್ದಾರೆ. ಹೊಸ ಚಿಂತನೆಯ ಹರಿಕಾರರಾಗಿ ಬಂದ ಪುಟ್ಟಣ್ಣ ಕಣಗಾಲ್ ಚಿತ್ರೋದ್ಯಮದ ಸಾಧ್ಯತೆಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರೇಕ್ಷಕರನ್ನು ಸಿನಿಮಾ ಮಂದಿರಗಳಿಗೆ ಸೆಳೆದರು.  ವ್ಯಾಪಾರಿ ಚಿತ್ರಗಳ ನಡುವೆಯೂ ಜನಮನ ಸೆಳೆಯುವ ಪ್ರಯೋಗಗಳ ಮೂಲಕ ಯಶಸ್ಸು ದಕ್ಕಿಸಿಕೊಂಡಿದ್ದು ಅವರ  ಹೆಚ್ಚುಗಾರಿಕೆ ಎಂದರು.
    ಸ್ಮಿಯಾಕ್ ಟ್ರಸ್ಟ್ ಗೌರವಾಧ್ಯಕ್ಷ ಬಸವರಾಜ್ ಬಿಸಿಲಹಳ್ಳಿ  ಕಣಗಾಲರ ಸಿನಿಮಾಗಳಂತೆ ಹಾಡುಗಳು ಇಂದಿಗೂ ತಾಜಾತನವನ್ನು ಉಳಿಸಿಕೊಂಡಿವೆ ಎಂದರು.
   ಅಧ್ಯಕ್ಷತೆ ವಹಿಸಿದ್ದ ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕ ಡಾ.ದಸ್ತಗೀರಸಾಬ್ ದಿನ್ನಿ , ಪುಟ್ಟಣ 70-80 ರ ದಶಕದಲ್ಲಿ  ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕೂತು ನೋಡುವ ಕಲಾತ್ಮಕ ಸಿನಿಮಾಗಳನ್ನು ಕೊಟ್ಟರು.ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರೊಂದಿಗೆ ಮೌಲಿಕ ಸಂದೇಶವನ್ನು ದಾಟಿಸಿದರು.ಅವರ ಸಮಾಜಮುಖಿ ಕಥನಗಳುದ್ದಕ್ಕೂ ಕೌಟುಂಬಿಕ ನೆಲೆಗಟ್ಟಿನ ವಿವರ, ನಿತ್ಯ ಬದುಕಿನ ತಲ್ಲಣ,ಸಾಮಾಜಿಕ ಸಂಕಷ್ಟ, ಆಶಯಗಳ ಪ್ರತಿಪಾದನೆ ಕಾಲ ಗತಿಗೆ ಅನುಗುಣವಾಗಿದೆಂದರು.
  ಡಾ.ಅಣ್ಣಾಜಿ ಕೃಷ್ಣಾರೆಡ್ಡಿ,ನೇತಿ ರಘುರಾಮ, ವಿಷ್ಣು ಹಡಪದ ವೇದಿಕೆ ಮೇಲಿದ್ದರು.ಗಾನ ನಮನವನ್ನು ಕಲಾವಿದರಾದ ಕೆ.ಆರ್ ಎರೇಗೌಡ,ಖಾಸಿಂ ಅಲಿ, ವಿಜಯೇಂದ್ರ,ಹನುಮಂತಪ್ಪ,ಜಗದೀಶ್ ನಡೆಸಿ ಕೊಟ್ಟರು. ಕು.ನವನಿಯವರಿಂದ  ಭರತನಾಟ್ಯ ಜರುಗಿತು.