ಪರಿಸರ ಸಂರಕ್ಷಣೆ ದಿನಾಚರಣೆಗೆ ಮಾತ್ರ ಸೀಮಿತವಾಗದಿರಲಿ – ನ್ಯಾ.ಜಿ.ಯೋಗೇಶ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.6 :- ಪರಿಸರ ಸಂರಕ್ಷಣೆ ಮಾಡುವುದು ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸುವುದು ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರೂ ಮನೆಯಂಗಳದಲ್ಲಿ ಸಸಿ ನೆಟ್ಟು ಮಕ್ಕಳಂತೆ ಪಾಲನೆ ಪೋಷಣೆ ಮಾಡಿದಲ್ಲಿ ಅದು ನಮ್ಮ ಸುತ್ತಲ ಪರಿಸರವಾಗಿ ಒಳ್ಳೆಯ ಗಾಳಿ ಮಳೆ ತರುವಲ್ಲಿ ಸಹಕಾರಿಯಾಗಲಿದೆ ಎಂದು ಕೂಡ್ಲಿಗಿ ಹಿರಿಯ ಶ್ರೇಣಿ  ಸಿವಿಲ್ ನ್ಯಾಯದೀಶರಾದ ಜಿ ಯೋಗೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಕಕ್ಕುಪ್ಪಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಬುಧವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಸಸಿಗಳನ್ನು ನೆಟ್ಟು ನಂತರ ಮಾತನಾಡುತ್ತ ಮನುಷ್ಯ ತನ್ನ ಅಲ್ಪ ತೃಪ್ತಿಗಾಗಿ ಪರಿಸರವನ್ನು ನಾಶ ಮಾಡುತ್ತಿದ್ದು ಆ ಪರಿಸರ ನಾಶದಿಂದ ನಮ್ಮೆಲ್ಲರ ವಿನಾಶಕ್ಕೆ ಕಟ್ಟಿಟ್ಟ ಬುತ್ತಿಯಾಗಿದೆ ಪ್ರತಿಯೊಬ್ಬರೂ ಮನೆಗೊಂದು ಮರ, ಊರಿಗೊಂದು ವನ ನಿರ್ಮಿಸುವ ಪಣ ತೊಡಬೇಕು ಎಂದು ತಿಳಿಸಿದರು.
ಕೂಡ್ಲಿಗಿ ವಲಯ ಅರಣ್ಯಧಿಕಾರಿ ಜಿ ಎಸ್ ಸಂದೀಪನಾಯಕ ಮಾತನಾಡಿ ಜನತೆ ಅರಣ್ಯ ಪ್ರದೇಶವನ್ನು ನಮ್ಮ ಪ್ರದೇಶವೆಂದು ಕಾಪಾಡಿದಲ್ಲಿ ಉತ್ತಮ ಗಾಳಿ ಸಿಗುವ ಜೊತೆಗೆ ಕಾಲಕಾಲಕ್ಕೆ ತಕ್ಕಂತೆ ಮಳೆ ಬರುವ ಜೊತೆಗೆ ನಮ್ಮ ಸುತ್ತಮುತ್ತಲಿನ ರೈತನ ಬದುಕು ಸಹ ಬೆಳೆದ ಬೆಳೆಯ ಹಸಿರಿನಂತೆ ಹಸನಾಗಿರುತ್ತದೆ ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಸುಂದರ ಪರಿಸರ ನಿರ್ಮಿಸೋಣ ಎಂದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ನ್ಯಾಯಾಲಯದ  ಸಿವಿಲ್ ನ್ಯಾಯಾಧೀಶೆ ಸಿ.ಮಹಾಲಕ್ಷ್ಮಿ , ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಿ.ಎಂ.ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ವಿರುಪಾಪುರ ಎಚ್.ವೆಂಕಟೇಶ್, ಕಾರ್ಯದರ್ಶಿ ಡಿ.ಕೆ.ಬಿ.ರಾಜು, ಅಪರ ಸರಕಾರಿ ವಕೀಲ ಕೆ.ಜಿ.ಶಿವಪ್ರಸಾದ್, ಸಹಾಯಕ ಸರಕಾರಿ ಅಭಿಯೋಜಕಿ ವೈ.ಶಿಲ್ಪಾ, ವಕೀಲ ಸಿ.ವಿರೂಪಾಕ್ಷಪ್ಪ ಸೇರಿ ಇತರೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.