ನರೇಗಾ ಕಾರ್ಮಿಕರೊಂದಿಗೆ ಪರಿಸರ ದಿನಾಚರಣೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.6 :-  ಬಿಸಿಲಿನ ತಾಪಮಾನದಲ್ಲಿ ದುಡಿಯುವ ನರೇಗಾ ಕಾರ್ಮಿಕರ ಜೊತೆಗೂಡಿ ತಮ್ಮ ಹುಟ್ಟೂರಾದ ತಾಲೂಕಿನ ನರಸಿಂಹಗಿರಿಯಲ್ಲಿ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ ಶ್ರೀನಿವಾಸ ಎನ್ ಟಿ ಸಸಿನೆಡುವ ಮೂಲಕ ಪರಿಸರದ ಜಾಗೃತಿ ಮೂಡಿಸಿ ವಿಶ್ವ ಪರಿಸರ ದಿನಾಚರಣೆಗೆ ಬುಧವಾರ ಚಾಲನೆ ನೀಡಿದರು.
ನಂತರ ಶಾಸಕ ಡಾ ಶ್ರೀನಿವಾಸ ಮಾತನಾಡಿ  ಜಾಗತಿಕ ತಾಪಮಾನ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯ ಹೆಚ್ಚಾಗಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಪರಿಸರ ದಿನಾಚರಣೆಯನ್ನು ಕೇವಲ ಸಾಂಕೇತಿಕವಾಗಿ ಆಚರಿಸದೇ ಲಕ್ಷಾಂತರ ಸಸಿಗಳನ್ನು ತಾಲೂಕಿನಾದ್ಯಂತ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ. ಹಾಗಾಗಿ, ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಮೂಲಕ ಪರಿಸರವನ್ನು ಉಳಿಸಲು ಪಣತೊಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಹನುಮಂತಪ್ಪ, ನರೇಗಾ ತಾಪಂ ಎಂ.ಐ.ಎಸ್ ಸಂಯೋಜಕ ಪಿ.ಚಂದ್ರಪ್ಪ, ಮುಖಂಡರು, ಗ್ರಾಪಂ ಸದಸ್ಯರು ಸೇರಿ ಇತರರಿದ್ದರು.