ಸೆ. 29,30ರಂದು ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಭೆ ಮತ್ತು ರಾಜ್ಯ ಸಮ್ಮೇಳನ
ಕಲಬುರಗಿ:ಸೆ.24:ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಇದೇ ಸೆಪ್ಟೆಂಬರ್ 29 ಮತ್ತು 30ರಂದು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತನ ಒಡಲು ಬರಿದಾಗಿದೆ. ಬತ್ತಿದ ಎದೆಯಲ್ಲಿ ಬಿತ್ತಿದ ಬೀಜಗಳು ಫಲ ನೀಡದೇ ದು:ಖಿಸುವ ಕಣ್ಣುಗಳಲ್ಲಿ ನೀರು ಸಹ ಬತ್ತಿ ಹೋಗಿವೆ. ಕೃಷಿ ಮಾಡುವುದು ಹಿರಿಮೆಯ ಸಂಕೇತ ಎಂಬ ಭಾವನೆ ಕಣ್ಮರೆಯಾಗಿ ಶಾಪವಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೆರ್ ಭೂಮಿಯಲ್ಲಿ ಕಬ್ಬು ಬೆಳೆದು ರಾಜ್ಯದ 72 ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುತ್ತಾರೆ. ಆದಾಗ್ಯೂ, ಸಕ್ಕರೆ ಕಂಪೆನಿ ಮಾಲಿಕರು ಕಬ್ಬಿನ ಜೊತೆ ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ. ಒಂದು ಟನ್ ಕಬ್ಬು ಬೆಳೆಯಲು ರಾಜ್ಯದ ಕೃಷಿ ಬೆಲೆ ಆಯೋಗದ ಪ್ರಕಾರ 3580ರೂ.ಗಳಷ್ಟು ಖರ್ಚು ಬರುತ್ತದೆ. ಹಾಗಾಗಿ ಅದಕ್ಕೆ ಶೇಕಡಾ 10ರಷ್ಟು ಲಾಭಾಂಶ ಸೇರಿಸಿ ಟನ್ ಕಬ್ಬಿಗೆ 3938ರೂ.ಗಳನ್ನು ಶೇಕಡಾ 9.5 ಇಳುವರಿ ಆಧಾರದಲ್ಲಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಅವರು ಹೇಳಿದರು.
ಅದಾಗ್ಯೂ, ಡಾ. ಸ್ವಾಮಿನಾಥನ್ ವರದಿ ಪ್ರಕಾರ ಖರ್ಚಿನ ಜೊತೆಗೆ ಶೇಕಡಾ 50ರಷ್ಟು ಲಾಭಾಂಶ ಸೇರಿಸಿದರೆ ಒಂದು ಟನ್ ಕಬ್ಬಿಗೆ 5370ರೂ.ಗಳನ್ನು ಬೆಲೆ ನಿಗದಿಪಡಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಅಡಳಿತ ನಡೆಸುವ ಸರ್ಕಾರಗಳಲ್ಲಿ ಸಕ್ಕರೆ ಉದ್ಯಮಪತಿಗಳು ಮೇಲುಗೈ ಸಾಧಿಸಿರುವಾಗ ಕೇಂದ್ರ ಸರ್ಕಾರ ಶೇಕಡಾ 10.25 ಇಳುವರಿಗೆ ಕೇವಲ 3,400ರೂ.ಗಳು, ಶೇಕಡಾ 9.5ರಷ್ಟು ಇಳುವರಿಗೆ 3,150ರೂ.ಗಳು ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರಕ್ಕೆ ಉಪ ಉತ್ಪನ್ನಗಳ ಲಾಭಾಂಶದ ಆಧಾರದಲ್ಲಿ ರಾಜ್ಯ ಸಲಹಾ ಬೆಲೆ ನಿಗದಿಪಡಿಸಲು ಮುಕ್ತ ಅವಕಾಶವಿದೆ ಎಂದು ಅವರು ತಿಳಿಸಿದರು.
ಈ ಅವಕಾಶವನ್ನು ಬಳಸಿಕೊಂಡ ಹರಿಯಾಣ 900, ಪಂಜಾಬ್-900, ತಮಿಳ್ನಾಡು-250ರೂ.ಗಳನ್ನು ಎಫ್‍ಆರ್‍ಪಿ ಬೆಲೆ ಜೊತೆಗೆ ಎಸ್‍ಎಪಿಯಂತೆ ನೀಡುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ 2022-2023ರಲ್ಲಿ ಎಥನಾಲ್ ಉತ್ಪಾದಿಸುವ ಸಕ್ಕರೆ ಕಂಪೆನಿಗಳು 150ರೂ.ಗಳು, ಎಥೆನಾಲ್ ಉತ್ಪಾದಿಸದೇ ಇರುವ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 100ರೂ.ಗಳು ನಿಗದಿಪಡಿಸಿ ಆದೇಶ ಮಾಡಿದ್ದರು. ಆದಾಗ್ಯೂ, ಅದು ಜಾರಿಯಾಗಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
2023-2024 ಹಾಗೂ 2024-2025ನೇ ಸಾಲಿಗೆ ಇನ್ನು ಎಸ್‍ಎಪಿ ದರ ನಿಗದಿ ಮಾಡದೇ ವಂಚಿಸುತ್ತಿದ್ದಾರೆ. ಇಳುವರಿ ಪರೀಕ್ಷೆ ಮಾಡುವಲ್ಲಿ ಮತ್ತು ತೂಕದಲ್ಲಿ ಮೋಸ ಕಂಡುಬರುತ್ತಿದೆ. ಆದ್ದರಿಂದ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ಪಾರದರ್ಶಕತೆ ಕಾಪಾಡಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಒಂದು ಟನ್ ಕಬ್ಬಿನಿಂದ ಉಪ ಉತ್ಪನ್ನಗಳು ಸೇರಿದಂತೆ 12ರಿಂದ 13000ರೂ.ಗಳ ಆದಾಯ ಬರುತ್ತದೆ ಎಂಬುದರ ಕುರಿತು ಕೋಯಮುತ್ತೂರಿನ ಕಬ್ಬು ಪ್ರಜನನ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತರ ನಿರ್ದೇಶರ ಆದೇಶದ ಮೇರೆಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿತ ಮಾಡದೇ ಹೆಚ್ಚುವರಿಯಾಗಿ ಮಾಡುವ ಕಾರ್ಖಾನೆಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಕಬ್ಬನ್ನು ಸಕಾಲದಲ್ಲಿ ಕಟಾವು ಮಾಡದೇ ವಿನಾಕಾರಣ ಕಬ್ಬು ಒಣಗಿಸಲಾಗುತ್ತಿದೆ. ಸರಬರಾಜು ಮಾಡಿದ 14 ದಿನಗಳೊಳಗೆ ಹಣ ಪಾವತಿ ಮಾಡದೇ ವಿಳಂಬ ಮಾಡಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯ ಸಮ್ಮೇಳನ ಹಾಗೂ ರಾಷ್ಟ್ರೀಯ ಸಮಿತಿಯ ಸಭೆ ಹಮ್ಮಿಕೊಳ್ಳಲಾಗಿದೆ. ಕಬ್ಬು ಬೆಳೆಗಾರರ ಮುಖಂಡರು, ಕೃಷಿ ತಜ್ಞರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಡಾ. ಪ್ರತಾಪಸಿಂಗ್ ಕೆ. ತಿವಾರಿ, ಎಂ.ಬಿ. ಸಜ್ಜನ್, ಅಲ್ತಾಫ್ ಇನಾಂದಾರ್, ಪದ್ಮಿನಿ ಕಿರಣಗಿ, ಶಾಂತಾ ಎನ್. ಘಂಟೆ, ಲವಿತ್ರಾ ಮುಂತಾದವರು ಉಪಸ್ಥಿತರಿದ್ದರು.