ಪಿಎಸ್‍ಐ ನೇರ ನೇಮಕಾತಿ ಆಯ್ಕೆ ಪಟ್ಟಿ ತಡೆಹಿಡಿಯಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ
ಕಲಬುರಗಿ:ಸೆ.24:545 ಪಿಎಸ್‍ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ಹಾಗು ನೇಮಕಾತಿ ಆದೇಶಗಳನ್ನು ಸೆಪ್ಟೆಂಬರ್ 27ರವರೆಗೆ ತಡೆಹಿಡಿಯಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಒಳಾಡಳಿತ ಇಲಾಖೆಗೆ ಪತ್ರ ಬರೆದಿದ್ದಾರೆ.
545 ಪಿಎಸ್‍ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ಕಳೆದ 2021ರ ಜನವರಿ 21ರಂದು ಹೊರಡಿಸಲಾಗಿತ್ತು. ಪರಿಶೀಲನೆಯಲ್ಲಿರುವ 2023ರ ಫೆಬ್ರವರಿ 1ರ ಸರ್ಕಾರದ ಸುತ್ತೋಲೆಗಿಂತ 2 ವರ್ಷಗಳಷ್ಟು ಮೊದಲೇ ಅಧಿಸೂಚನೆಯಾಗಿದೆ. ಪ್ರಸ್ತುತ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ 2023ರ ಫೆಬ್ರವರಿ 1ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆಯ ಸಿಂಧುತ್ವದ ಸಂಬಂಧ ದಾಖಲಾಗಿರುವ ಅರ್ಜಿ ತೀರ್ಪಿನಲ್ಲಿ ಈ ಸುತ್ತೋಲೆಯನ್ನು ರದ್ದುಪಡಿಸಲಾಗಿದೆ ಎಂದು ಅವರು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ತೀರ್ಪಿನ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿ ಸಂಬಂಧ ನೀಡುವ ತೀರ್ಪಿಗೊಳಪಟ್ಟು ಪಿಎಸ್‍ಐ ನೇಮಕಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 2020ರ ಜೂನ್ 6ರಂದು ಹೊರಡಿಸಿದ ಸುತ್ತೋಲೆಯನ್ವಯ ಕ್ರಮವಹಿಸುವಂತೆ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಿಗೆ ತಿಳಿಸಲಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳು ಪಾಲಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ವಿವಿಧ ಸುತ್ತೋಲೆಗಳಲ್ಲಿ ಗೊಂದಲಗಳಿವೆ ಮತ್ತು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 27ರಂದು ಸಚಿವ ಸಂಪುಟದ 371(ಜೆ) ಉಪ ಸಮಿತಿ ಸಭೆ ಕರೆಯಲಾಗಿದೆ. ಹೀಗಾಗಿ ಸೆಪ್ಟೆಂಬರ್ 27ರವರೆಗೆ 545 ಪಿಎಸ್‍ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ಹಾಗು ನೇಮಕಾತಿ ಆದೇಶಗಳನ್ನು ಪ್ರಕಟಿಸದೇ ತಡೆ ಹಿಡಿಯಬೇಕು ಎಂದು ಸಚಿವ ಖರ್ಗೆ ಪತ್ರದಲ್ಲಿ ಕೋರಿದ್ದಾರೆ.