ದೇಶ ಕಟ್ಟುವ ಕಾರ್ಯಕ್ಕೆ ಎನ್.ಎಸ್.ಎಸ್ ಕೊಡುಗೆ ಅನನ್ಯ
ಕಲಬುರಗಿ:ಸೆ.24: ಇಂದಿನ ವಿದ್ಯಾರ್ಥಿಗಳೇ, ನಾಳಿನ ನಾಗರಿಕರಾಗಿರುವದರಿಂದ, ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಹಾಗೂ ನೈತಿಕ ಮೌಲ್ಯಗಳು, ಸಮಯಪ್ರಜ್ಞೆ, ಬದ್ದತೆ, ಜವಾಬ್ದಾರಿ, ಪ್ರಾಮಾಣಿಕತೆ, ನಿಶ್ಚಿತ ಗುರಿ, ನಾಯಕತ್ವದ ಗುಣಗಳು, ನಿರಂತರ ಪ್ರಯತ್ನ ಅಂತಹ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿ ದೇಶದ ಅಮೂಲ್ಯ ಮಾನವ ಸಂಪತ್ತನ್ನಾಗಿಸುವ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯು ದೇಶ ಕಟ್ಟುವ ಕಾರ್ಯಕ್ಕೆ ತನ್ನದೇ ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಆರ್.ಜೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಪ್ರಲ್ಹಾದ ಬುರ್ಲಿ ಅಭಿಮತ ವ್ಯಕ್ತಪಡಿಸಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ಸೇವಾ ಯೋಜನೆಯ 55ನೇ ಸಂಸ್ಥಾಪನಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಮಾತನಾಡಿ, ಭ್ರಾತೃತ್ವ ಭಾವನೆ, ಸಮಾನತೆ, ಜಾತ್ಯಾತೀತತೆ, ವೈಜ್ಞಾನಿಕ, ವೈಚಾರಿಕತೆ ಮನೋಭಾವ ಬೆಳೆಸುತ್ತದೆ. ಕಂದಾಚಾರ, ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡುತ್ತದೆ. ಪರಿಸರ ಕಾಪಾಡುವುದು, ಸ್ವಚ್ಛತೆ, ಜನ ಜಾಗೃತಿ ಮೂಡಿಸುವ ಮೂಲಕ ಸ್ವಾವಲಂಬನೆ ಬದುಕನ್ನು ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಒಂದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಮಹಾತ್ಮ ಗಾಂಧಿಜೀಯವರ ಕನಸಿನ ಕೂಸಾದ ಎನ್.ಎಸ್.ಎಸ್ ಅವರ ಜನ್ಮಶತಮಾನೋತ್ಸವ ವರ್ಷವಾದ 1969ರಲ್ಲಿ ಅಂದಿನ ಶಿಕ್ಷಣ ಸಚಿವರಾದ ಡಾ.ವಿ.ಕೆ.ಆರ್.ವಿ.ರಾವ್ ಚಾಲನೆ ನೀಡಿದರು. ಇದು ‘ನಾನು ಸದಾ ಸಿದ್ಧ’ ಎಂಬ ಅರ್ಥವನ್ನು ನೀಡುತ್ತದೆ. ‘ನನಗಾಗಿ ಅಲ್ಲ, ನಿಮಗಾಗಿ’ ಎಂಬ ಧ್ಯೇಯ ವಾಕ್ಯವನ್ನು ಹೊಂದಿದೆ. ಶಾಂತಿ, ತ್ಯಾಗ, ಪ್ರಗತಿಯ ಸಂಕೇತದ ಚಕ್ರ ಹೊಂದಿರುವ ಚಿಹ್ನೆ ಇದೆ. ವಿದ್ಯಾರ್ಥಿ ದೆಸೆಯಿಂದಲೇ ಉನ್ನತ ವ್ಯಕ್ತಿತ್ವ ನಿರ್ಮಾಣದ ಬಗೆಯನ್ನು ಅರಿತು, ದೇಶಸೇವೆ ಮಾಡಲು ಇದು ಪ್ರೇರಣೆ ನೀಡುತ್ತದೆ ಎಂದರು. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಮಾಡಿಕೊಂಡು ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಎನ್.ಎಸ್.ಎಸ್ ಸ್ಥಾಪನೆಯ ಹಿನ್ನಲೆ, ಉದ್ದೇಶಗಳು, ಗುರಿಗಳು, ಸಾಧನೆ, ಸ್ವಯಂ ಸೇವಕರ ಪಾತ್ರ ಸೇರಿದಂತೆ ಅನೇಕ ಅಂಶಗಳ ಕುರಿತು ಸುದೀರ್ಘವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ ದೊಡ್ಡಮನಿ, ಸುನೀಲ ರಾಠೋಡ, ಗ್ರಂಥಪಾಲಕ ಲಿಂಗರಾಜ ಹಿರೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಬಸವರಾಜ ಹಡಪದ, ಎನ್.ಎಸ್.ಎಸ್ ತಂಡದ ಪ್ರತಿನಿಧಿಗಳಾದ ಹುಲೆಪ್ಪ, ನಾಗರತ್ನ ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.