ಪರಿಸರ ಸಂರಕ್ಷಣೆ ನಮ್ಮೆಲ್ಲರ ಧರ್ಮವಾಗಬೇಕಾಗಿದೆ : ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು. ಜೂನ್-6:ಮನುಷ್ಯ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಧರ್ಮವಾಗಬೇಕಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶ್ರೀ ರಂಭಾಪುರಿ ಪೀಠದ ಯಾತ್ರಿ ನಿವಾಸದ ಹಿಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತೆಂಗಿನ ಸಸಿ ನೆಟ್ಟು ಪರಿಸರ ಸಂರಕ್ಷಣೆ ಚಿಂತನಾ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.ಮಾನವ ಜನಾಂಗದ ಅಳಿವು ಉಳಿವು ಪರಿಸರ ಸಂರಕ್ಷಣೆಯಲ್ಲಿ ಅಡಗಿದೆ. ಮನುಷ್ಯನ ವೈಯಕ್ತಿಕ ಹಿತಾಸಕ್ತಿಗಾಗಿ ಕಾಡು ನಾಶವಾಗುತ್ತಿದೆ. ಪರಿಸರ ಸಂರಕ್ಷಣೆಯತ್ತ ಇರಬೇಕಾದಷ್ಟು ಒಲವು ಆಸಕ್ತಿಯಿಲ್ಲದ ಕಾರಣ ಜೀವ ಸಂಕುಲ ಬಹಳಷ್ಟು ನೋವುಗಳನ್ನು ಅನುಭವಿಸಬೇಕಾಗಿದೆ. ಜನಸಂಖ್ಯೆ ಹೆಚ್ಚಳ, ಕೃಷಿಗಾಗಿ ಅರಣ್ಯ ನಾಶ ಮತ್ತು ಕೈಗಾರಿಕೆಗಳ ಸ್ಥಾಪನೆಯ ಉದ್ದೇಶದಿಂದ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಅರಣ್ಯ ನಾಶದಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ. ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಊರಿಗೊಂದು ಶಾಲೆ ಮನೆಗೊಂದು ಮರ ನೆಡಬೇಕಾದ ಸದುದ್ದೇಶ ಎಲ್ಲರಲ್ಲೂ ಬೆಳದು ಬರಬೇಕಾಗಿದೆ. ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗೆಗೆ ಹೆಚ್ಚಿನ ಅರಿವು ಉಂಟು ಮಾಡುವ ಅವಶ್ಯಕತೆಯಿದೆ. ಪರಿಸರಕ್ಕೆ ಮಾರಕವಾದ ರಾಸಾಯನಿಕ ಗೊಬ್ಬರದ ಬದಲಾಗಿ ನೈಸರ್ಗಿಕ ಗೊಬ್ಬರ ಬಳಸುವುದರಿಂದ ಭೂಮಿಯ ಶಕ್ತಿ ಸರಿಯಾಗಿರಲು ಸಾಧ್ಯವಾಗುತ್ತದೆ. ಪ್ರತಿ ವರುಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಿ ಕೈ ಬಿಡುವುದಲ್ಲ. ನಿರಂತರ ಪರಿಸರ ಸಂರಕ್ಷಣೆಯ ಬಗೆಗೆ ಗಮನ ಹರಿಸಬೇಕಾದ ಅಗತ್ಯವಿದೆ ಎಂದರು. ಈ ಸಮಾರಂಭದಲ್ಲಿ ಗುಳೇದಗುಡ್ಡದ ಅಭಿನವ ಕಾಡಸಿದ್ಧೇಶ್ವರ ಶ್ರೀಗಳು, ದೋಟಿಹಾಳ ಚಂದ್ರಶೇಖರ ಶ್ರೀಗಳು, ಗುರುಕುಲ ಕುಲಪತಿ ಸಿದ್ಧಲಿಂಗಯ್ಯ ಶಾಸ್ತಿç, ಕುಮಾರಸ್ವಾಮಿ ಹಿರೇಮಠ, ಚನ್ನವೀರಯ್ಯ ಚಿಗರಿಮಠ, ಸಿಂದಗಿ ಹಿರೇಮಠದ ಶಾಂತವೀರಸ್ವಾಮಿ, ಗುಂಡೇನಹಳ್ಳಿ ಕುಮಾರ-ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.