ಸುರಕ್ಷತೆ ನಿಯಮಗಳ ಪಾಲಿಸಿ,ಅಪಘಾತಗಳ ನಿಯಂತಿಸಿ
ಕೋಲಾರ,ಜೂ,೬:ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಅಂದಾಗ ರಸ್ತೆ ಅಪಘಾತಗಳು ತಡಿಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.
ನಗರದ ಜಿಲ್ಲಾ ಆಡಳಿತ ಕಛೇರಿಯ ನ್ಯಾಯಾಂಗದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆಗಳ ಅಗಲೀಕರಣ ಕಾಮಗಾರಿಗಳು ನಡೆಯುತ್ತಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾತಗಳು ನಡೆಯುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಳಗಳಾದ ಜಿಲ್ಲಾ ವ್ಯಾಪ್ತಿಯ ಪ್ರಕೃತಿ ಕಾಲೇಜಿನ ಬಳಿ ಹಾಗೂ ಚುಂಚದೇವನಹಳ್ಳಿ ಮುಳಬಾಗಿಲು ತಾಲ್ಲೂಕು ವ್ಯಾಪ್ತಿಯ ಕಪ್ಪಲಮಡಗು ಕಾಂತರಾಜ ವೃತ್ತ ಮತ್ತು ನಂಗಲಿ ಬಾರ್ಡರ್‌ನ ಮೂಡುಗೆರೆಯಿಂದ ಜೆ.ಎಸ್.ಆರ್ ಟೋಲ್ ಸೇರಿದಂತೆ ಈ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ನಡೆಯದಂತೆ ಆದಷ್ಟು ತಡೆಯಬೇಕು ಎಂದರು.
ಇತರೆ ಸ್ಥಳಗಳಲ್ಲಿಯೂ ಸಹ ಅಪಘಾತ ನಡೆಯದ ಹಾಗೆ ನೋಡಿಕೊಳ್ಳಬೇಕೆಂದರು. ಅದೇ ರೀತಿ ಕುಡಿದು ವಾಹನ ಚಾಲನೆ ಮಾಡುವುದು ದ್ವಿಚಕ್ರ ವಾಹನಗಳಲ್ಲಿ ೨ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುವುದು ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ ಹಾಗೂ ವಾಹನಗಳ ವಿಮಾ ಮತ್ತು ಪರವಾನಗಿ ಇರುವ ಬಗ್ಗೆ ಖಚಿತಪಡಿಸಿಕೊಂಡು, ಪರವಾನಗಿಯಿಲ್ಲದ ಪಕ್ಷದಲ್ಲಿ ಅಂತಹವರಿಗೆ ದಂಡವಿಧಿಸಬೇಕು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.
ವೇಗ ಮಿತಿಮೀರಿ ವಾಹನಗಳ ಚಾಲನೆ ಮಾಡುವುದು ಮುಂತಾದ ಪ್ರಕರಣ ಪ್ರಕರಣಗಳಲ್ಲಿ ಐ.ಎಂ.ವಿ ಕಾಯ್ದೆಯಡಿ ದೂರು ದಾಖಲಿಸಬಹುದೆಂದು ತಿಳಿಸಿದರು.
ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು ನಿರ್ವಾಹಕರು ಹಾಗೂ ಕ್ಲೀನರ್ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅವರ ಕುಟುಂಬದ ಸದಸ್ಯರಿಗೆ ಅಪಘಾತ ಪರಿಹಾರ ಸೌಲಭ್ಯವನ್ನು “ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ” ಎಂಬ ಸೌಲಭ್ಯವಿದೆ ಎಂದರು.
ಅಪಘಾತದಿಂದ ಮರಣ ಹೊಂದಿದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ೧ನೇ ತರಗತಿಯಿಂದ ಪದವಿಪೂರ್ವ, ೧೨ನೇ ತರಗತಿಯವರೆಗೆ ವಾರ್ಷಿಕ ತಲಾ ೧೦,೦೦೦ ರೂ.ಗಳನ್ನು ಶೈಕ್ಷಣಿಕ ಧನ ಸಹಾಯ ನೀಡುತ್ತಾರೆ ಇ-ಶ್ರಮ ಕಾರ್ಡ್ ಮಾಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದರು.
ಕೆಜಿಎಫ್ ಎಸ್‌ಪಿ ಶಾಂತರಾಜ್ ಮಾತನಾಡಿ,೨೦೨೩ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ೦೮ ಅಪಘಾತ, ೦೩ ಮರಣ, ೦೯ ಮಂದಿಗೆ ಗಾಯವಾಗಿರುತ್ತದೆ. ರಾಜ್ಯ ಹೆದ್ದಾರಿಗಳಲ್ಲಿ ೧೦೦ ಅಪಘಾತಗಳಲ್ಲಿ ೩೫ ಮರಣ ಹೊಂದಿದ್ದು, ೭೮ ಮಂದಿಗೆ ಗಾಯಗಳಾಗಿರುತ್ತವೆ ಹಾಗೂ ಜಿಲ್ಲಾ ಮುಖ್ಯ ರಸ್ತೆ ಮತ್ತು ಗ್ರಾಮೀಣ ರಸ್ತೆಗಳಲ್ಲಿ ೯೫ ಅಪಘಾತ, ೩೩ ಮರಣ, ೯೨ ಮಂದಿಗೆ ಗಾಯವಾಗಿರುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಡಿಹೆಚ್‌ಓ ಡಾ.ಜಗದೀಶ್, ಸಾರಿಗೆ ಅಧಿಕಾರಿ ವೆಂಕಟೇಶ್ವರಲು, ಕೆ.ಜಿ.ಎಫ್‌ನ ಸಹಾಯಕ ಸಾರಿಗೆ ಅಧಿಕಾರಿ ನಯಾಜಾ ಪಾಷಾ, ಲೋಕೋಪಾಯೋಗಿ ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ ಇದ್ದರು.