ಮತದಾರರಿಗೆ ಧನ್ಯವಾದ ತಿಳಿಸಿದ ಶಾಸಕ ಹೆಚ್.ಟಿ.ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.06: ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮತದಾರರು ನಿರೀಕ್ಷೆಗೂ ಮೀರಿದ ಮತಗಳನ್ನು ನೀಡಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಬಾರಿ ಬಹುಮತದಿಂದ ಸಂಸದರನ್ನಾಗಿ ಆಯ್ಕೆಮಾಡಿದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಪಟ್ಟಣದ ಬಸವೇಶ್ವರ ಬಡಾವಣೆಯ ಜೆಡಿಎಸ್ ಕಛೇರಿಯಲ್ಲಿ ಮತದಾರರಿಗೆ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಮಾತನಾಡಿ
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಮಾರಣ್ಣ ಕಾಂಗ್ರೆಸ್ ಪಕ್ಷದ ಹಣಬಲದ ಅಭ್ಯರ್ಥಿಯೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಜಿಲ್ಲೆಯ ಎರಡು ಪಕ್ಷಗಳ ಮತದಾರರು ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿ ಅಭೂತಪೂರ್ವ ಮತ ನೀಡಿ ಗೆಲುವು ತಂದುಕೊಟ್ಟಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಮತದಾರರು ಪಕ್ಷಾತೀತವಾಗಿ ಕುಮಾರಣ್ಣನ ಬಗ್ಗೆ ಒಲವನ್ನು ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 2,84,620 ಮತಗಳ ಅಂತರದಿಂದ ಗೆಲುವು ಸಾಧಿಸಿ ರಾಜ್ಯಕ್ಕೆ ಎರಡನೇ ಹೆಚ್ಚು ಅಂತರದ ಮತಗಳ ಗೆಲುವು ದಾಖಲಿಸಿದ್ದಾರೆ. ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಹಣೆಪಟ್ಟಿ ಕಳಚಿದಂತಾಗಿದೆ. ಕುಮಾರಣ್ಣನವರು ಕೇಂದ್ರದಲ್ಲಿ ಮಂತ್ರಿಯಾಗಲಿದ್ದು ರಾಜ್ಯದ ಅಭಿವೃದ್ದಿಗೆ ತನ್ನದೇ ಆದ ಕೊಡುಗೆ ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಯನ್ನು ಮಾಡಲಿದ್ದಾರೆ. ತಾಲ್ಲೂಕಿನಾದ್ಯಂತ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಾಳಾಗಿದ್ದು ಅವುಗಳ ದುರಸ್ತಿ ಮತ್ತು ಹೇಮಾವತಿ ನದಿ ಪಾತ್ರದ ಮಂದಗೆರೆ, ಹೇಮಗಿರಿ ಮತ್ತು ಅಕ್ಕಿಹೆಬ್ಬಾಳು ಅಣೆಕಟ್ಟುಗಳ ಅಭಿವೃದ್ದಿ ನೆನೆಗುದಿಗೆ ಬಿದ್ದಿದ್ದು ಇನ್ನು ಅನೇಕ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಭರವಸೆ ಸಿಕ್ಕಂತಾಗಿದೆ. ಕುಮಾರಣ್ಣ ಮಾಜಿ ಪ್ರಧಾನಿಗಳ ಮಗ ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ಆಡಳಿತದ ಅನುಭವವಿದೆ. ಮತ್ತು ದೇವೇಗೌಡರ ಮಾಗದರ್ಶನದಲ್ಲಿ ಕೆಲಸ ಮಾಡಲಿದ್ದಾರೆ. ಇದು ರಾಜ್ಯದ ಅಭಿವೃದ್ದಿಗೆ ಖಂಡಿತವಾಗಿಯೂ ನೆರವಾಗಲಿದೆ.
ಕುಮಾರಣ್ಣ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಗುಣಗಳುಳ್ಳ ನಾಯಕರಾಗಿದ್ದಾರೆ. ಈ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ನಿಜವಾದ ಜನನಾಯಕನನ್ನು ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಇದು ಸತ್ಯಕ್ಕೆ ಸಂದ ಜಯವಾಗಿದೆ. ಕುಮಾರಸ್ವಾಮಿ ಅವರಿಗೆ ಸದಾ ಜನ ಬೆಂಬಲ ಇರುತ್ತದೆ ಎಂಬುದು ಸಾಬೀತಾಗಿದೆ ಮತ್ತು ಅವರನ್ನು ಸೋಲಿಸಲು ಕಾಣದ ಕೈಗಳು ಕುತಂತ್ರ ನಡೆಸಿದ್ದವು. ಅಂತಹವರಿಗೆ ಕಾಂಗ್ರೆಸ್ ಸರ್ಕಾರ ಬೆಂಬಲವಾಗಿತ್ತು. ಆದರೆ ಜನರ ಆಶೀರ್ವಾದದ ಮುಂದೆ ಯಾವ ಮಂತ್ರ-ತಂತ್ರ, ಕುತಂತ್ರವೂ ಫಲ ನೀಡಿಲ್ಲ. ಜನರ ಮನಸ್ಸಿನಲ್ಲಿ ಹೆಚ್‍ಡಿಕೆ ಗಳಿಸಿರುವ ಶಾಶ್ವತ ಸ್ಥಾನವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕರ್ನಾಟಕದ ಆಸ್ತಿ. ಇವರ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆ ಬಳಿಯಬೇಕೆಂದು ಹಲವು ಷಡ್ಯಂತ್ರ ನಡೆದವು. ಆದರೆ ಜನರು ಅದ್ಯಾವುದಕ್ಕೂ ಸೊಪ್ಪು ಹಾಕದೆ ಮತ್ತೊಮ್ಮೆ ದೇವೇಗೌಡರ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ. ಮಂಡ್ಯ ಜೆಡಿಎಸ್‍ನ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಅಲ್ಲದೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಒಗ್ಗಟ್ಟಿನಿಂದ ತಾಲ್ಲೂಕಿನಲ್ಲಿ ಇಪ್ಪತ್ತಾರು ಸಾವಿರಕ್ಕೂ ಅಧಿಕ ಮತಗಳ ಲೀಡ್ ಬಂದಿದೆ. ಮುಖ್ಯಮಂತ್ರಿಯಾಗಿ ಜನರ ಮನೆ ಬಾಗಿಲಿಗೆ ಹೋಗಿ ಸೇವೆ ಮಾಡಿದ ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಮೋದಿ ಅವರ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನ ಪಡೆಯುವುದು ನಿಶ್ಚಿತ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎ.ಎನ್.ಜಾನಕಿರಾಮ್,ಮನ್ ಮುಲ್ ನಿರ್ದೇಶಕ ಡಾಲುರವಿ, ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಮೋಹನ್, ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಮಾತನಾಡಿ ಕುಮಾರಣ್ಣನಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮತ ನೀಡಿದ ಎಲ್ಲಾ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಕಾನೂನು ಘಟಕದ ತಾಲ್ಲೂಕು ಅಧ್ಯಕ್ಷ ವಿ.ಎಸ್.ಧನಂಜಯ್‍ಕುಮಾರ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಬಲದೇವ್, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ,ಜೆಡಿಎಸ್ ಹೋಬಳಿ ಅಧ್ಯಕ್ಷರಾದ ರವಿಕುಮಾರ್, ಬಸವಲಿಂಗಪ್ಪ,ತಾ.ಪಂ.ಮಾಜಿ ಸದಸ್ಯ ಹೊಸಹೊಳಲು ರಾಜು, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್‍ಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ಬೈರಪುರ ಹರೀಶ್, ಶಾಸಕ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.